ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒತ್ತುವರಿ ಜಾಗ ಸ್ವಾಧೀನ ಪ್ರಕ್ರಿಯೆ 2 ತಿಂಗಳ ಬಳಿಕ ಮತ್ತೆ ಪುನರಾರಂಭಗೊಂಡಿದೆ.ಇತ್ತೀಚೆಗೆ ನೆಲ್ಲಿಕಟ್ಟೆಯಲ್ಲಿ ಒಂದು ಮನೆಯನ್ನು ದೇವಳದ ಅಧೀನಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಆದರೆ ಸೆ.26ರಂದು ಮುಖ್ಯರಸ್ತೆ ಬದಿಯಲ್ಲೇ ದೇವಳದ ಹೆಸರಿನಲ್ಲಿರುವ ಮತ್ತೊಂದು ಜಾಗವನ್ನು ವಶಕ್ಕೆ ಪಡೆಯಲು ಮುಂದಾದಾಗ, ಅಲ್ಲಿದ್ದವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶಾಸಕರು ಒಂದು ವಾರದ ಕಾಲಾವಕಾಶ ನೀಡಿದರು. ವಾರಸುದಾರರ ಹೆಸರಿನಲ್ಲಿರುವ ಮೂಲ ದಾಖಲೆಗಳಿದ್ದಲ್ಲಿ ದೇವಳದ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಪುತ್ತೂರು ಮುಖ್ಯರಸ್ತೆ ಕಾಲು ಸಂಕದ ಬಳಿಯಲ್ಲಿ ಸುಮಾರು 35 ಸೆಂಟ್ಸ್ ಜಾಗ ಮಹಾಲಿಂಗೇಶ್ವರ ದೇವಸ್ಥಾನದ ಹೆಸರಿನಲ್ಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ, ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದರು. ಈ ವೇಳೆ ಆ ಸ್ಥಳದಲ್ಲಿದ್ದ ಎವಿಲಿನ್ ಅವರ ಪುತ್ರ ರೋಶನ್ ಮತ್ತು ಹಂಚಿನ ಮನೆಯಲ್ಲಿ ವಾಸ್ತವ್ಯ ಇರುವ ಪ್ರವೀಣ್ ಅವರು ಶಾಸಕರ ಜೊತೆ ಮಾತನಾಡಿ ಇದು ನಮ್ಮ ದೊಡ್ಡಪ್ಪ ಚಾರ್ಲ್ಸ್ ಲಸ್ರಾದೋ ಅವರ ಜಾಗ ಅದಕ್ಕೆ ದಾಖಲೆಯೂ ಇದೆ. ಅವರ ಮಕ್ಕಳು ಈಗ ಬೆಂಗಳೂರಿನಲ್ಲಿದ್ದಾರೆ ಅವರು ಬಂದು ಮಾತನಾಡುತ್ತೇನೆಂದು ಹೇಳಿದ್ದರಿಂದ ಕಾಲಾವಕಾಶ ನೀಡುವಂತೆ ಅವರು ಮನವಿ ಮಾಡಿದರು.
ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಹೆಸರಿನಲ್ಲಿರುವ ಜಾಗದ ಕುರಿತು ಶಾಸಕರಿಗೆ ಮಾಹಿತಿ ನೀಡಿದರು. ಶಾಸಕರು ಮಾತನಾಡಿ ದೇವಸ್ಥಾನದ ಜಾಗಗಳು ಎಲ್ಲೆಲ್ಲಿ ಇದೆಯೋ ಅದನ್ನು ದೇವಸ್ಥಾನಕ್ಕೆ ಮರು ಸ್ವಾಧೀನ ಮಾಡುವಂತೆ ಸರಕಾರದ ಸುತ್ತೋಲೆ ಇದೆ. ನೀವು ಇವತ್ತು ಒಂದು ವಾರದ ಸಮಯ ಕೇಳಿದ್ದೀರಿ. ಹಾಗಾಗಿ ನಿಮ್ಮಲ್ಲಿ ದಾಖಲೆ ಇದ್ದರೆ ಒಂದು ವಾರದ ಒಳಗೆ ದೇವಸ್ಥಾನದ ಕಚೇರಿಗೆ ನೀಡಿ. ಮುಂದಿನ ಶನಿವಾರದ ಒಳಗೆ ದಾಖಲೆ ನೀಡಿ ಎಂದು ಶಾಸಕರು ತಿಳಿಸಿದರು. ಜೊತೆಗೆ ಮುಂದಿನ ಒಂದುವಾರದ ಕಾಲವಕಾಶ ನೀಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ತಿಳಿಸಿದರು.
























