ಮಂಗಳೂರು: ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಸಿಎಂ ಡಿಕೆ ಶಿವಕುಮಾರ್ ಅವರು 60 ಯೋಜನೆಗಳಿಗೆ 32,611 ಕೋಟಿ ರೂ ಅನುದಾನ ಘೋಷಿಸಿದ್ದಾರೆ. ಅಲ್ಲದೇ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ಸಹ ನೀಡಲಾಗಿದೆ. ಇದೇ ವಿಚಾರಗಳನ್ನಿಟ್ಟುಕೊಂಡು ಸಚಿವ ಯುಟಿ ಖಾದರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಡುಗೆ ನೀಡಿದೆ’ ಎಂದು ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಯುಟಿ ಖಾದರ್, ‘ಬಿಜೆಪಿ ಜಿಲ್ಲೆಯಲ್ಲಿ ಕನಿಷ್ಠ ಸಂಪುಟ ಸಭೆ ಏನಾದ್ರೂ ನಡೆಸಿದ್ದಾರೆಯೇ? ಯಾವುದಾದರೂ ಪ್ರಮುಖ ಯೋಜನೆ ರೂಪಿಸಿದ್ದಾರೆಯೇ? ನಾವು ಯಾರದ್ದೋ ಮಾತು ಕೇಳಿ ಕೆಲಸ ಮಾಡುವುದಿಲ್ಲ. ಜನರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಅವರು ಹೇಳಿದರು.
ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ವಿಚಾರವಾಗಿ ಮಾತನಾಡಿದ ಅವರು, ‘ತುಳು ಭಾಷೆ ಬಗ್ಗೆ ಮೋಹನ್ ಆಳ್ವ ಆಗ ವರದಿ ನೀಡಿದ್ದರು. ಹಿಂದಿನ ಸರ್ಕಾರದ ಬಳಿಯೇ ಮೋಹನ್ ಆಳ್ವ ವರದಿ ಇತ್ತು. ಆಗ ಸುನೀಲ್ ಕುಮಾರ್ ಸಚಿವರಾಗಿದ್ದರು. ವರದಿಗೆ ಸಹಿ ಹಾಕಿ ಮುಂದಿನ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಹಾಗೆ ಮಾಡಿಲ್ಲ, ಯಾಕೆಂದರೆ ಸಹಿ ಹಾಕುವ ಧೈರ್ಯ ಬೇಕು’ ಎಂದು ಸಚಿವ ಖಾದರ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳು ಬೋಗಸ್, ಯಾವುದು ಅನುಷ್ಠಾನಕ್ಕೆ ಬರುವುದಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡಿದ್ದವು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ‘ಸಿಎಂ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ’ ಎಂದು ತಿರುಗೇಟು ನೀಡಿದ್ದಾರೆ. ಆ ಮೂಲಕ ಮಂಗಳೂರಿಗರಿಗೆ ಹೊಸ ಭರವಸೆ ಮೂಡಿಸಿದ್ದಾರೆ.
‘ಯೋಜನೆಗಳ ರೂಪುರೇಷೆ, ತಾಂತ್ರಿಕ ಸಮಸ್ಯೆಗಳ ಪರಿಹಾರ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಯೋಜನೆಗಳ ಅನುಷ್ಠಾನ ನಡೆಯಲಿದ್ದು, ಅಧಿಕಾರಿಗಳು ರೂಪಿಸುವ ಯೋಜನೆಗಳನ್ನು ಸರ್ಕಾರ ಅಂತಿಮಗೊಳಿಸಲಿದೆ’ ಎಂದು ಮಾಹಿತಿ ನೀಡಿದರು.
‘ಆರ್ಥಿಕ ಇಲಾಖೆಯು ಸರ್ಕಾರಕ್ಕೆ ಸಲಹೆ, ಎಚ್ಚರಿಕೆ ನೀಡುವುದು ಸಹಜ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ನಡೆಯುತ್ತಾ ಬಂದಿರುವ ಪ್ರಕ್ರಿಯೆ, ಆದರೆ ಕ್ಯಾಬಿನೆಟ್ಗೆ ತನ್ನದೇ ಆದ ಜವಾಬ್ದಾರಿ ಇದೆ. ಸರ್ಕಾರ ನೀಡಿದ ಮಾತನ್ನು ಈಡೇರಿಸುವುದು ಸರ್ಕಾರಕ್ಕೆ ಗೊತ್ತಿದೆ. ಅನುದಾನದ ಕೊರತೆ ಆಗದಂತೆ ಆದಾಯ ಹೆಚ್ಚಿಸುವ ಹಾಗೂ ನಷ್ಟವನ್ನು ತಡೆಗಟ್ಟುವ ಬಗ್ಗೆ ಮುಖ್ಯಮಂತ್ರಿಗೆ ಸ್ಪಷ್ಟ ಅರಿವಿದೆ’ ಎಂದರು.
ವೆನ್ಲಾಕ್ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ‘ಉತ್ತಮ ಚಿಕಿತ್ಸೆ ಸಿಕ್ಕರೆ ರೋಗಿಗಳು ಹೆಚ್ಚಾಗುವುದು ಸಾಮಾನ್ಯ. ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶ್ರೀಮಂತರೂ ಬರುತ್ತಾರೆ. ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಗೂ ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜುಗಳಿರುವಾಗ ಅಲ್ಲಿನ ಸಣ್ಣಪುಟ್ಟ ಪ್ರಕರಣಗಳನ್ನೂ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸುವ ಅಗತ್ಯವೇನು? ಸಣ್ಣ ಪ್ರಕರಣಗಳನ್ನು ಇಲ್ಲಿಗೆ ಕಳುಹಿಸುವುದಾದರೆ ಅಲ್ಲಿರುವ ವೈದ್ಯರಿಗೆ ವೇತನವೇಕೆ ನೀಡಬೇಕು’ ಎಂದು ಪ್ರಶ್ನಿಸಿದರು.
ಯಾವ ಪ್ರಕರಣವನ್ನು ಯಾವ ಆಸ್ಪತ್ರೆಗೆ ಕಳುಹಿಸಬೇಕು ಎಂಬುದಕ್ಕೆ ಸೂಕ್ತ ನಿಯಮ ರೂಪಿಸಬೇಕಾಗಿದೆ. ಮೊಬೈಲ್ ಆ್ಯಪ್ ಮೂಲಕ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ಗಳು ಹಾಗೂ ಐಸಿಯು ಸೌಲಭ್ಯಗಳ ಮಾಹಿತಿ ದೊರೆಯುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಮೂಡಬಿದ್ರೆ, ಬೈಂದೂರು, ಭಟ್ಕಳ ಸೇರಿದಂತೆ ವಿವಿಧ ತಾಲೂಕು ಆಸ್ಪತ್ರೆಗಳು ಅಭಿವೃದ್ಧಿಯಾದಂತೆ ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳ ಒತ್ತಡವೂ ಕಡಿಮೆಯಾಗಲಿದೆ’ ಎಂದಿದ್ದಾರೆ.
‘ಬಹುತೇಕ ಕಾಯಿಲೆಗಳಿಗೆ ಉಪ್ಪು ಮತ್ತು ಸಕ್ಕರೆಯಿಂದ ಬರುತ್ತಿದೆ. ಉಪ್ಪಿನಲ್ಲಿರುವ ಸೋಡಿಯಂ ಪ್ರಮಾಣ ನಿಯಂತ್ರಿಸುವ ಕುರಿತು ಚರ್ಚೆ ಮಾಡಲಾಗುತ್ತಿದೆ. ಪ್ಯಾಕೆಟ್ ಮೇಲೆ ಆರೋಗ್ಯದ ಬಗ್ಗೆ ಎಚ್ಚರಿಕೆ ಸಂದೇಶ ಅಳವಡಿಸುವ ಬಗ್ಗೆಯೂ ಚಿಂತನೆ ಇದೆ. ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಸರ್ಕಾರದ ಜವಾಬ್ದಾರಿ. ಇಷ್ಟೆಲ್ಲಾ ಮಾಡಿದ್ರೂ ಹೆಚ್ಚು ಉಪ್ಪು ಸೇವಿಸಿದ್ರೆ ನಾವೇನೂ ಮಾಡಲಾಗದು. ವೆನ್ಲಾಕ್ ಆಸ್ಪತ್ರೆಯೂ ಇದೆ, ಖಾಸಗಿ ಆಸ್ಪತ್ರೆ ಇದೆ, ಸ್ಮಶಾನವೂ ಇದೆ’ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.



























