ಪುತ್ತೂರು: ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸುವ ನಿಟ್ಟಿನಲ್ಲಿ ಪುತ್ತೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಎಂಬ ಹೆಸರಿನಲ್ಲಿ ಈಗಾಗಲೇ ಎಲ್ಲಾ ರೀತಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ಲಾನ್ ಬಿ ಯಂತೆ 2027ರ ಡಿಸೆಂಬರ್‌ನಲ್ಲಿ 50 ವೈದ್ಯಕೀಯ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ತರಗತಿ ಪ್ರಾರಂಬಿಸಲಾಗುವುದು. ಇದಕ್ಕಾಗಿ ಹಳೆ ಕೋರ್ಟ್ ಕಟ್ಟಡವನ್ನು ಮೂಲಸೌಕರ್ಯಕ್ಕಾಗಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ತಾಂತ್ರಿಕ ತಂಡ ಪರಿಶೀಲಿಸಿ ಅನುಮತಿಗಾಗಿ ಅರ್ಜಿ ಹಾಕಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪರಿಶೀಲನೆಗಾಗಿ ಪುತ್ತೂರಿಗೆ ಆಗಮಿಸಿದ ರಾಜೀವ ಗಾಂಧಿ ಆರೋಗ್ಯ ವಿವಿಯ ತಾಂತ್ರಿಕ ತಂಡದ ಜೊತೆಗೆ ಹಳೆ ಕೋರ್ಟ್ ಕಟ್ಟಡ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಮೆಡಿಕಲ್ ಕಾಲೇಜು ಪ್ರಾರಂಭದ ವರ್ಷ ಹಳೆ ಕೋರ್ಟ್ ಕಟ್ಟಡದಲ್ಲಿ 50 ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಂಡು ಅವರನ್ನು 2ನೇ ವರ್ಷಕ್ಕೆ ಬನ್ನೂರಿನಲ್ಲಿ ಕಟ್ಟಡ ಪೂರ್ಣಗೊಂಡ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ವರ್ಗಾಯಿಸಲಾಗುವುದು. ಇದಕ್ಕಾಗಿ ಈಗಾಗಲೇ ಸಿಎಂ ಸಹಿತ ಉಸ್ತುವಾರಿ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರ ಅನುಮತಿ ಪಡೆಯಲಾಗಿದೆ. ಹಳೆ ಕಟ್ಟಡದಲ್ಲಿ ಕಾಲೇಜಿನ ನಾಲ್ಕು ವಿಭಾಗಗಳಿಗೆ ಪೂರಕವಾಗಿ ವ್ಯವಸ್ಥೆಗಳಿವೆ. ಪರೀಕ್ಷಾ ಕೇಂದ್ರಕ್ಕೂ ಹಾಲ್ ವ್ಯವಸ್ಥೆ ಇರುತ್ತದೆ.
ಪುತ್ತೂರಿನ ಕಾಲೇಜಿಗೆ ಹುದ್ದೆಗಳ ಭರ್ತಿಗೂ ಕೂಡ ಕ್ಯಾಬಿನೆಟ್ ಅನುಮತಿ ನೀಡಿದ್ದು, ವೈದ್ಯರು 97, ನರ್ಸಿಂಗ್ ಸಿಬಂದಿ 372, ಪ್ಯಾರಾ ಮೆಡಿಕಲ್ ಕಾಲೇಜು ಸಿಬಂದಿ 182, ಗ್ರೂಪ್ ಡಿ 100, ಸೆಕ್ಯೂರಿಟಿ ಗಾರ್ಡ್ 50 ಹುದ್ದೆಗಳು ಸೇರಿ ಸುಮಾರು 1 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹೊಸ ವೈದ್ಯಕೀಯ ಕಾಲೇಜು-ಆಸ್ಪತ್ರೆ ಮಾಡುವವರಿಗೆ ರಾಜೀವ ಗಾಂಧಿ ವಿವಿಗೆ ಅರ್ಜಿ ಹಾಕುವುದಕ್ಕೆ ಅ.13 ಕೊನೆಯ ದಿನವಾಗಿದ್ದು, ಅದಕ್ಕೆ ಮೊದಲು ಸಿದ್ಧತೆ ಮಾಡಿಕೊಂಡು ಅರ್ಜಿ ಹಾಕುವುದಾಗಿ ಅವರು ತಿಳಿಸಿದರು.
ನವೀರಣಕ್ಕೆ ಅನುದಾನದ ಬಗ್ಗೆ ಮಾಹಿತಿ ನೀಡಿದ ಶಾಸಕರು, ಮೆಡಿಕಲ್ ಕಾಲೇಜು ಆರಂಭಗೊಳ್ಳಬೇಕಾದರೆ 220 ಬೆಡ್ ಗಳ ಆಸ್ಪತ್ರೆ ಬೇಕಾಗಿದ್ದು, ಪುತ್ತೂರಿನ ಹಾಲಿ ಸರಕಾರಿ ಆಸ್ಪತ್ರೆಯಲ್ಲಿ 120 ಬೆಡ್ ವ್ಯವಸ್ಥೆ ಇರುತ್ತದೆ. ಉಳಿದಂತೆ ಹಳೆ ತಾಲೂಕು ಕಟ್ಟಡ ಕಟ್ಟಡವನ್ನು ನವೀಕರಿಸಿ ಉಳಿದ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ರೀತಿಯ ನವೀಕರಣದ ವ್ಯವಸ್ಥೆಗಾಗಿ 5.73 ಕೋ.ರೂ. ಅನುದಾನ ಮೀಸಲಿರಿಸಲಿದ್ದೇವೆ. ಜತೆಗೆ ಸಿಟಿ ಸ್ಕ್ಯಾನ್ ವ್ಯವಸ್ಥೆ, ಸುಸಜ್ಜಿತ ಬ್ಲಡ್ ಬ್ಯಾಂಕ್ ಕೂಡ ಅನುಷ್ಠಾನಗೊಳ್ಳಲಿದೆ ಎಂದರು.
ಮೆಡಿಕಲ್ ಕಾಲೇಜು ಆರಂಭದ ಸಂದರ್ಭದಲ್ಲಿ ಹಾಸ್ಟೆಲ್‌ಗಳ ಆವಶ್ಯಕತೆಯಿದ್ದು, ಸುತ್ತಮುತ್ತಲಿನ ಸರಕಾರಿ ಖಾಲಿ ಕಟ್ಟಡಗಳಲ್ಲಿ 1 ವರ್ಷದ ಅವಧಿಗೆ ಸರಕಾರದ ಅನುಮತಿ ಪಡೆದುಕೊಂಡು ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು. ಬೆಟ್ಟಂಪಾಡಿಯಲ್ಲಿ ಸಿದ್ಧವಿರುವ ಹಾಸ್ಟೆಲ್ ಬಳಕೆ ಮಾಡುವ ಯೋಚನೆ ಇದೆ. ನರ್ಸಿಂಗ್ ಕಾಲೇಜು ಆರಂಭಕ್ಕೂ ಅರ್ಜಿ ಹಾಕುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ರಾಜೀವ ಗಾಂಧಿ ವಿವಿಯವರು ಪುತ್ತೂರಿಗೆ ಭೇಟಿ ನೀಡಲಿದ್ದು, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದವರು ಬರುವಾಗ ಮೂಲಸೌಕರ್ಯ ಅನುಷ್ಠಾನಗೊಳ್ಳಲಿದ್ದು, ಬಳಿಕ ಅವರು ಅನುಮತಿ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಪುತ್ತೂರು ಮೆಡಿಕಲ್ ಕಾಲೇಜು ವಿಶೇಷಾಧಿಕಾರಿಯಾಗಿರುವ ಡಾ.ಲೋಹಿತ್ ಕುಮಾರ್ ಅವರು, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯಂತೆ ವೈದ್ಯಕೀಯ ಕಾಲೇಜು ಆರಂಭಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಇದಕ್ಕೆ ಬೇಕಾದ ಕಟ್ಟಡಗಳು, ಇತರ ವ್ಯವಸ್ಥೆಗಳ ಕುರಿತು ಪರಿಶೀಲನೆ ಮಾಡುವುದಕ್ಕೆ ತಾಂತ್ರಿಕ ತಂಡ ಆಗಮಿಸಿದೆ. ಕಾಲೇಜಿನ ಜತೆಗೆ 220 ಬೆಡ್ ಆಸ್ಪತ್ರೆಯ ಪರಿಶೀಲನೆ, ಬಾಲಕ-ಬಾಲಕಿಯರ ಹಾಸ್ಟೆಲ್ ಕಟ್ಟಡ ಪರಿಶೀಲಿಸಿ ವರದಿ ಸಿದ್ಧಪಡಿಸಿ ರಾಜೀವ ಗಾಂಧಿ ಆರೋಗ್ಯ ವಿವಿಗೆ ಅ.13ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಈ ಎಲ್ಲಾ ರೀತಿಯ ಮೂಲಸೌಕರ್ಯ ಸಿದ್ಧಗೊಂಡ ಬಳಿಕ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಅನುಮತಿಗಾಗಿ ಕಳುಹಿಸಲಿದ್ದು, ಹಿಂದೆ ಬೇರೆ ಭಾಗಗಳಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನೂ ವೈದ್ಯಕೀಯ ಕಾಲೇಜು ಆರಂಭಕ್ಕೆ ಆಯೋಗ ಪರಿಗಣಿಸಿದೆ.
ಈ ಕಾಲೇಜಿನಲ್ಲಿ ಅನಾಟಮಿ, ಫಿಝಿಯಾಲಜಿ, ಬಯೋಕೆಮೆಸ್ಟ್ರಿ ಹಾಗೂ ಕಮ್ಯೂನಿಟಿ ಮೆಡಿಸಿನ್ ವಿಭಾಗಳಿದ್ದು, ನವೆಂಬರ್ ತಿಂಗಳಲ್ಲಿ ಕೇಂದ್ರ ಸರಕಾರಕ್ಕೆ ಅರ್ಜಿ ಹಾಕಿ ಡಿಸೆಂಬರ್-ಜವರಿಯಲ್ಲಿ ಪರಿಶೀಲನೆ ಮಾಡಿಕೊಂಡು ಪರವಾನಿಗೆ ನೀಡಲಿದ್ದಾರೆ. ಇಲ್ಲದೇ ಇದ್ದರೆ ನ್ಯೂನ್ಯತೆಗಳನ್ನು ಸರಿ ಮಾಡುವುದಕ್ಕೆ ಒಂದು ತಿಂಗಳ ಸಮಯಾವಕಾಶ ನೀಡುತ್ತಾರೆ. ೨ನೇ ಹಂತದ ಪರಿಶೀಲನೆಯ ಬಳಿಕ ಎಪ್ರಿಲ್-ಮಾರ್ಚ್ ನಲ್ಲಿ ಅನುಮೋದನೆ ಕೊಟ್ಟ ಬಳಿಕ ಜೂನ್-ಜುಲೈನಲ್ಲಿ ನೀಟ್ ಕೌನ್ಸಿಲ್ ಬಳಿಕ ಕಾಲೇಜು ಪ್ರವೇಶಕ್ಕೆ ಅವಕಾಶ ಸಿಗುತ್ತದೆ ಎಂದು ಶಾಸಕರು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ ಡಿ.ಕೆ., ವಿವಿಯ ತಾಂತ್ರಿಕ ತಂಡದಲ್ಲಿ ಡಾ.ಗಂಗಾಧರ್, ಡಾ.ಅವಿನಾಶ್ ಎಸ್.ಎಸ್, ಡಾ.ಶಶಾಂಕ್ ಕೆ.ಜೆ. ಉಪಸ್ಥಿತರಿದ್ದರು.



























