ಮಂಗಳೂರು: ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಘಟನೆ ನಡೆದಿದೆ. ‘ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, 9 ಕಾರ್ಮಿಕರಿಗೆ ಗಾಯಗಳಾಗಿವೆ. ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದೆ’ ಎಂದು ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್ವಿ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಮನೀಶ್(30) ಮೃತ ವ್ಯಕ್ತಿ. ಸುರತ್ಕಲ್ ನಿವಾಸಿ ರಾಜೇಶ್ಗೆ ಶೇಕಡಾ 35ರಷ್ಟು ಗಾಯಗಳಾಗಿದ್ದು, ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಸಾದ್, ಇಂದ್ರಜೀತ್, ರಾಮನ್ಗೆ ಎಜಿ ಆಸ್ಪತ್ರೆಗೆ ಮತ್ತು ಗಾಯಾಳುಗಳಾದ ಜೆರೋಮ್, ಜಯರಾಮ್, ಅವಿನಾಶ್, ಅಕ್ಷಯ್ ಹಾಗೂ ಮತ್ತೋರ್ವನಿಗೆ MRPL ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಧ್ಯಾಹ್ನ 12.15 ಗಂಟೆಗೆ ಎಂಆರ್ಪಿಎಲ್ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. 11.30 ಗಂಟೆಗೆ ಶಿಫ್ಟ್ ಬದಲಾವಣೆ ಹಿನ್ನೆಲೆ ಘಟಕದಿಂದ ಕಾರ್ಮಿಕರು ಹೊರ ಹೋಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ 9 ಕಾರ್ಮಿಕರು ಗಾಯಗೊಂಡಿದ್ದಾರೆ. ಒಂದೆ ವೇಳೆ ಕಾರ್ಮಿಕರು ಒಳಗೆ ಇದ್ದಿದ್ದರೆ ಭಾರೀ ಸಾವು ನೋವು ಸಾಧ್ಯತೆ ಇತ್ತು ಎನ್ನಲಾಗಿದೆ.
ಸದ್ಯ ಸ್ಥಳಕ್ಕೆ ಐದು ಅಗ್ನಿಶಾಮಕ ದಳ ವಾಹನ, ಎಸ್ಡಿಆರ್ಎಫ್ ಮತ್ತು ಆಂಬ್ಯುಲೆನ್ಸ್ಗಳು ಬಂದಿದ್ದು, ಪೊಲೀಸ್ ಕಮಿಷನರ್ ಸುದೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ನರ್ವಡೆ ವಿನಾಯಕ್ ಕಾರ್ಬಾರಿ ಕೂಡ ಭೇಟಿ ನೀಡಿದ್ದಾರೆ.
ಇನ್ನು ಭೀಕರ ಸ್ಫೋಟದಿಂದ ಪಣಂಬೂರು, ಕಾವೂರು, ಸುರತ್ಕಲ್, ಜೋಕಟ್ಟೆ ಭಾಗದ ಸುತ್ತಮುತ್ತಲಿನ ಕೆಲವೆಡೆ ಮನೆಗಳು ಕಂಪಿಸಿದೆ. ಸ್ಪೋಟದ ತೀರ್ವತೆ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಷ್ಟೇ ಅಲ್ಲದೆ ಭಾರೀ ಸ್ಟೋಟದ ಶಬ್ಧಕ್ಕೆ ಗ್ರಾಮದ ಜನರು ಬೆಚ್ಚಿಬಿದ್ದಾರೆ.























