ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಧಿ ಮೀರಿದ ಮಾತ್ರೆಗಳನ್ನು ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಪುತ್ತೂರು ನಗರದ ಕೂರ್ನಡ್ಕದ ಮಹಿಳೆಯೊಬ್ಬರಿಗೆ ಆಸ್ಪತ್ರೆಯಲ್ಲಿ ನೀಡಿದ ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳ ಬಳಕೆಯ ಅವಧಿ ಮೀರಿದ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೂ ಸಂಬಂಧಪಟ್ಟ ಮಹಿಳೆಯ ಸಂಬಂಧಿಕರು ತಂದಿದ್ದು, ಈ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ವೈದ್ಯಾಧಿಕಾರಿಗಳು ನೀಡಿದ್ದಾರೆ.
ಪುತ್ತೂರಿನ ಕೂರ್ನಡ್ಕದ ಮಹಿಳೆ ಸೆಪ್ಟೆಂಬರ್ 16 ರಂದು ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳನ್ನು ಪಡೆಯಲು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಹಿಳೆಯನ್ನು ಪರಿಶೀಲಿಸಿದ ಬಳಿಕ ಮಧುಮೇಹಕ್ಕೆ ಸಂಬಂಧಿಸಿದ ಗ್ಲೈಮಾಪೆರೈಡ್ ಮಾತ್ರೆಯ ಜೊತೆಗೆ ಇತರ ಮಾತ್ರೆಗಳನ್ನು ನೀಡಿದ್ದರು. ಆದರೆ ಮಧುಮೇಹಕ್ಕೆ ನೀಡಿದ ಗ್ಲೈಮಾಪೆರೈಡ್ ಮಾತ್ರೆಗಳೆಲ್ಲವೂ ಅವಧಿ ಮೀರಿದ ಮಾತ್ರೆಗಳಾಗಿದ್ದು, ಅಗಸ್ಟ್ ತಿಂಗಳಿನಲ್ಲೇ ಇವುಗಳ ಬಳಕೆಯ ಅವಧಿ ಮುಗಿದಿತ್ತು. ಈ ಬಗ್ಗೆ ಅರಿವಿಲ್ಲಮ ಮಹಿಳೆ ಇದೇ ಮಾತ್ರೆಗಳನ್ನು ಹತ್ತು ದಿನಗಳ ಕಾಲ ನುಂಗಿದ್ದರು. ಆದರೆ ಎರಡು ದಿನಗಳ ಹಿಂದೆ ಮಹಿಳೆಯ ಆರೋಗ್ಯದಲ್ಲಿ ಕೊಂಚ ಏರುಪೇರಾಗಿರೋದನ್ನು ಗಮನಿಸಿದ ಮನೆ ಮಂದಿ ಆಕೆಯ ಮಾತ್ರೆಗಳನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವಧಿ ಮೀರಿದ ಮಾತ್ರೆಗಳ ಮಾಹಿತಿ ದೊರೆತಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವಧಿ ಮೀರಿದ ಮಾತ್ರೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ. ಮಾತ್ರೆಗಳ ವಿತರಣೆಯಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಲಾಗಿದೆ.
ಅವಧಿ ಮಾತ್ರೆಗೆ ಸಂಬಂಧಿಸಿದಂತೆ ದೂರು ಬಂದಿರುವ ಹಿನ್ನಲೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಈ ಸಂಬಂಧ ಔಷಧಿ ವಿತರಣೆಯ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಮಾತ್ರೆಗಳ ಅವಧಿ ಮುಗಿರುವ ಒಂದು ತಿಂಗಳ ಮೊದಲೇ ಮಾತ್ರೆಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಅಲ್ಲದೆ ಅವಧಿ ಮೀರುವ ಸಮಯವನ್ನು ರೋಗಿಗಳಿಗೆ ತಿಳಿಸಿ, ಅವಧಿ ಮುಗಿರುವ ಒಳಗೆ ಮಾತ್ರೆಗಳನ್ನು ಉಪಯೋಗಿಸುವಂತೆ ಸೂಚನೆಯನ್ನೂ ನೀಡಲಾಗುತ್ತದೆ. ಆದರೆ ಈ ರೀತಿ ಸಂಭವಿಸಲು ಕಾರಣಗಳೇನು ಎನ್ನುವುದರ ಬಗ್ಗೆ ಸೂಕ್ತ ವಿಚಾರಣೆ ನಡೆಸಿದ ಬಳಿಕ ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಪಾಗುವುದು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸರಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡವರು, ವಿಧ್ಯೆ ಇಲ್ಲದವರೆ ಭೇಟಿ ನೀಡುತ್ತಿದ್ದು, ಇಂತಹ ಅಚಾತುರ್ಯಗಳು ನಡೆಯದಂತೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.

























