ಪುತ್ತೂರಿನ ನಿವಾಸಿಯೊಬ್ಬರ ಮನೆಯಲ್ಲಿ ಸುಮಾರು 30 ವರ್ಷದ ಹಿಂದೆ ಒಂದು ತಿಂಗಳ ಹಸುಗೂಸು ಮೃತಪಟ್ಟಿತ್ತು. ಇತ್ತೀಚಿನ ಕೆಲವು ವರ್ಷದಲ್ಲಿ ಅವರ ಮನೆ ಹಾಗೂ ಕುಟುಂಬದಲ್ಲಿ ಅಕಾಲಿಕ ಘಟನೆಗಳು ಸಂಭವಿಸತೊಡಗಿತ್ತು. ಈ ಬಗ್ಗೆ ಅನೇಕರನ್ನು ಕೇಳಿದಾಗ ಪ್ರೇತ ಬಾಧೆಯ ಬಗ್ಗೆ ಅವರಿಗೆ ಗೊತ್ತಾಗಿದೆ. ಈ ಹಿನ್ನೆಲೆ ಪ್ರೇತಕ್ಕೆ ಮದುವೆ ಮಾಡಿಸಲು ಕುಟುಂಬದವರು ಮುಂದಾಗಿದ್ದಾರೆ.
ಪ್ರೇತ ವರ ಬೇಕಾಗಿರುವ ಬಗ್ಗೆ ಕುಟುಂಬ ಸೇರಿ ಅನೇಕ ಕಡೆಗಳಲ್ಲಿ ಕುಟುಂಬದವರು ಕೇಳಿದ್ದಾರೆ. ಆದರೆ, ಎಲ್ಲೂ ಪ್ರೇತ ವರ ಸಿಗದಿದ್ದಾಗ ಕೊನೆಯ ಪ್ರಯತ್ನವಾಗಿ ಪತ್ರಿಕೆಯಲ್ಲಿ ಜಾಹೀರಾತನ್ನು ಆ ಕುಟುಂಬದವರು ನೀಡಿದ್ದಾರೆ. ಜಾಹೀರಾತು ಬಳಿಕ ದಿನಕ್ಕೆ 50ಕ್ಕಿಂತಲೂ ಅಧಿಕ ಕರೆ ಬಂದಿವೆ. ಅದಲ್ಲದೇ ಪ್ರೇತ ಮದುವೆಗೆ ಸಂಬಂಧಿಸಿದಂತೆ ಸುಮಾರು 20ಕ್ಕೂ ಅಧಿಕ ಸಂಪರ್ಕ ಸಂಖ್ಯೆಗಳನ್ನು ಗೊತ್ತು ಮಾಡಿ ಮಾತುಕತೆ ನಡೆಸಿ ಮದುವೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಕುಲಾಲ ಜಾತಿಯ ಬಂಗೇರ ಬದಿಯ 30 ವರ್ಷಗಳ ಹಿಂದೆ ತೀರಿಹೋದ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷಗಳ ಹಿಂದೆ ತೀರಿಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೇ ದಯವಿಟ್ಟು ಸಂಪರ್ಕಿಸಿ ಎಂದು ಮೊಬೈಲ್ ಸಂಖ್ಯೆಯನ್ನು ಪತ್ರಿಕೆಯ ಜಾಹೀರಾತಿನಲ್ಲಿ ನೀಡಲಾಗಿದೆ.
ಪ್ರೇತ ಮದುವೆಯು ಹೊಸದೇನಲ್ಲ. ಜಾಹೀರಾತು ಕೊಟ್ಟಿರುವುದು ಹೊಸದಾಗಿ ಕಾಣುತ್ತಿದೆಯಷ್ಟೇ. ತುಳು ಸಂಸ್ಕೃತಿ ಅರಿತವರಿಗೆ ಇದು ಒಂದು ರೀತಿಯ ಭಾವನಾತ್ಮಕ ವಿಷಯ. ತುಳುನಾಡಿನ ನಂಬಿಕೆ ಪ್ರಕಾರ ಯಾವುದೇ ವ್ಯಕ್ತಿ ಸತ್ತ ಬಳಿಕ ಆತ ಸ್ವರ್ಗ ಅಥವಾ ನರಕ ಸೇರುತ್ತಾನೆ ಎಂಬಿತ್ಯಾದಿಗಳ ಕಲ್ಪನೆಯೇ ಇರಲಿಲ್ಲ. ಸತ್ತ ವ್ಯಕ್ತಿ (ಆತ ಹಿರಿಯನೂ-ಕಿರಿಯನೂ ಆಗಿರಬಹುದು) ದೈಹಿಕವಾಗಿ ನಮ್ಮ ನಡುವೆ ಇರದಿದ್ದರೂ ನಮ್ಮ ಆಗು ಹೋಗು -ಕಷ್ಟ ಸುಖಗಳನ್ನು ನೋಡುತ್ತಾ ಅನುಭವಿಸುತ್ತಾ ಆತ ನಮ್ಮ ಜೊತೆಯೇ ಇದ್ದಾನೆ ಎನ್ನುವ ಕಲ್ಪನೆ ತುಳುವರದ್ದು ಆಗಿತ್ತು. ಹೀಗಾಗಿ ತುಳುವರಲ್ಲಿ ವೈಕುಂಠ ಸಮಾರಾಧನೆ ಎನ್ನುವುದು ಇರಲಿಲ್ಲ. ಹಿಂದೆ ತುಳುವರಲ್ಲಿ ಸತ್ತವರಿಗೆ ಪಿಂಡ ಬಿಡುವ ಕ್ರಮವೂ ಇರಲಿಲ್ಲ. ಅದೇ ರೀತಿ ಸತ್ತವರನ್ನು ನೆನೆದು ಆತನಿಗೆ ಊಟ ಬಡಿಸುವ ಪದ್ಧತಿಯೂ ತುಳು ನಾಡಲ್ಲಿ ಇದೆ. ಅದೇ ರೀತಿ ಸತ್ತವರು ಮದುವೆಯಾಗಿರದಿದ್ದರೆ ಅವರ ಆತ್ಮಕ್ಕೆ ಮತ್ತೊಂದು ಆತ್ಮದ ಜೊತೆ ಮದುವೆ ಮಾಡುವ ಸಂಪ್ರದಾಯ ತುಳುನಾಡಲ್ಲಿ ಇದೆ.
ತುಳುನಾಡಿನ ಇನ್ಯಾವುದೋ ಮೂಲೆಯಲ್ಲಿ ಇಂಥದ್ದೇ ಸಮಸ್ಯೆಯ ಕುಟುಂಬವೊಂದು ಗಂಡಿನ ಹುಡುಕಾಟದಲ್ಲಿರ್ತದೆ. ಅವರು ಪರಸ್ಪರ ಕಂಡು ಮುಟ್ಟಿದರೆ ಆಯಿತು. ಮುಂದಕ್ಕೆ ಕುಲೆತ ಮದಿಮೆ.
ಮದುವೆ ಅಂದರೆ ಮದುವೆಯೇ. ಏನೋ ಬಾಯಿ ಮಾತಲ್ಲಿ ಮುಗಿಸುವಂಥದ್ದಲ್ಲ.
ಸಂಪ್ರದಾಯ ಪ್ರಕಾರ ಗಂಡಿ ಕಡೆಯವರು ಮಾವ, ಭಾವಂದಿರನ್ನೆಲ್ಲ ಸೇರಿಸ್ಕೋಂಡೇ ಮಾತುಕತೆಗೆ ಬರ್ಬೇಕು. ಚಾ, ಸಜ್ಜಿಗೆ, ಶೀರ ತಿಂದು ಹೆಣ್ಣನ್ನು ಒಪ್ಪಿ ಹೋಗ್ಬೇಕು. ಹೆಣ್ಣಿನ ಕಡೆಯವರು ಗಂಡಿನ ಮನೆ ನೋಡುವ ಶಾಸ್ತ್ತ ಮಾಡ್ಬೇಕು. ನಿಶ್ಚಿತಾರ್ಥದ ತಾಂಬೂಲ ಕೈ ಬದಲಾಯಿಸಬೇಕು.
ಬಳಿಕ ದಿನ, ಮುಹೂರ್ತ ನಿರ್ಧರಿಸಿ, ಕರುಳುಬಳ್ಳಿಯ ಎಲ್ಲರಿಗೂ ಆಮಂತ್ರಣ ಹೋಗ್ಬೇಕು. ಕರಿಮಣಿ, ಮದುವೆ ಜವುಳಿ ಶಾಪಿಂಗ್ ಆಗ್ಬೇಕು. ದಾರೆದ ಮದಿಮೆ ಸಂಪನ್ನಗೊಳ್ಬೇಕು. ಊಟ, ಪಾಯಸ ಮೆಲ್ಲಬೇಕು. ಪ್ರಸ್ತವೂ ಆಗ್ಬೇಕು. ಆಟಿಯ ಮಾಮಿಸಿಕೆ ಆಗ್ಬೇಕು, ಆಟಿ ಕುಲ್ಲೆರೆ ಮಗಳನ್ನು ತವರಿಗೆ ಕರೆದೊಯ್ಯಬೇಕು. ವಾಪಾಸು ಬಿಡಬೇಕು. ತುಳು ಮಾಸ ಆಟಿ ಅಂದ್ರೆ ಯಾವುದೇ ಶುಭಕಾರ್ಯಗಳು ಕರಾವಳಿ ಭಾಗದಲ್ಲಿ ನಡೆಯೋದಿಲ್ಲ.ಆದ್ರೆ ಈ ಸಮಯದಲ್ಲಿ ಕುಟುಂಬದಲ್ಲಿ ಯಾರಾದ್ರೂ ಮದುವೆಯಾಗದೇ ಅಕಾಲಿಕವಾಗಿ ಮೃತಪಟ್ಟಿದ್ದರೆ ಅಂತವರ ಮದುವೆ ಮಾಡೋ ಸಂಪ್ರದಾಯ ಇದೆ. ಇಲ್ಲೂ ನಡೆದಿರೋದು ಅಂತಹದೇ ಒಂದು ಮದುವೆಯ ಸಂಪ್ರದಾಯ.