ಹುಬ್ಬಳ್ಳಿ, ಮೇ 13: ಚುನಾವಣೆ ಹೊಸ್ತಿಲಿನ ನಡುವೆ ರಾಜ್ಯ ಬೆಚ್ಚಿ ಬೀಳುವ ಹತ್ಯೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಇದರ ವಿರುದ್ಧ ಸಾಕಷ್ಟು ಆಕ್ರೋಶ ಕೇಳಿಬಂದಿತು. ಪ್ರತಿಭಟನೆಗಳು ನಡೆದವು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಸಿಐಡಿ ತಂಡ ದೋಷಾರೋಪಣೆ ಪಟ್ಟಿ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಏಪ್ರಿಲ್ 18 ರಂದು ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬಾತ ಕಾಲೇಜಿನಲ್ಲೇ ಕೊಲೆ ಮಾಡಿದ್ದ. ಬಳಿಕ ನಿರಂಜನ್ ಅವರು ಈ ಪ್ರಕರಣದಲ್ಲಿ ಹಂತಕ ಫಯಾಜ್ ಅಷ್ಟೇ ಅಲ್ಲ ಇನ್ನೂ ಕೆಲವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.
ಈವರೆಗೆ ಹತ್ತು ಮಂದಿ ವಿಚಾರಣೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ತನಿಖೆ ನಡೆಸಲು ಸಿಐಡಿಗೆ ವಹಿಸಿತ್ತು. ಬಳಿಕ ತನಿಖೆ ಚುರುಕುಗೊಳಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಫಯಾಜ್ ಪೋಷಕರು ಹಾಗೂ ಇತರೇ 10 ಮಂದಿಯನ್ನು ಈವರೆಗೆ ತನಿಖೆಗೆ ಒಳಪಡಿಸಿದ್ದಾರೆ.
ಚಾರ್ಜ್‌ಶೀಟ್ ಸಲ್ಲಿಕೆ ಯಾವಾಗ?
ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಿಐಡಿ ತಂಡ ಅಗತ್ಯ ಮಾಹಿತಿ, ಪೊಲೀಸರಿಂದ ಕಡತ ಪಡೆದು ನಂತರ ಆರೋಪಿ ಸೇರಿದಂತೆ ಹಲವರನ್ನು ತನಿಖೆಗೆ ಒಳಪಡಿಸಿದ್ದಾರೆ. ಇದೀಗ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಸಿಐಡಿ ತಂಡ ಚಾರ್ಜ್ ಶೀಟ್ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದೆ. ಇನ್ನೊಂದೇ ವಾರದಲ್ಲಿ ಆರೋಪಿ ಕುರಿತು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ಸಿಐಡಿ ಉನ್ನತ ಮೂಲಗಳು ಮಾಹಿತಿ ನೀಡಿವೆ.