ಪುತ್ತೂರು: ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕೊಡಮಾಡಲ್ಪಡುವ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ
ಇರ್ದೆ ಗ್ರಾಮದ ಕುಕ್ಕುವಳ್ಳಿ ತರವಾಡಿನ ಗಿರಿಜಾ ಮತ್ತು ಕಲ್ಲಡ್ಕ ಕರಿಯಪ್ಪ ರೈ ಅವರ ಪುತ್ರನಾಗಿರುವ ನಾರಾಯಣ ರೈ ಕುಕ್ಕುವಳ್ಳಿಯವರು ಅಳಿಕೆಯ ಸತ್ಯಸಾಯಿ ಶಾಲೆಯಲ್ಲಿ ಎರಡು ವರ್ಷ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ 1976ರಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡು ಕೊಣಾಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೋಸ್ಟಿಂಗ್ ಪಡೆದರು ಬಳಿಕ ಬೆಟ್ಟಂಪಾಡಿ ಹಿರಿಯ ಪ್ರಾಥಮಿಕ ಶಾಲೆ, ಮುಂಡೂರು ಫಸ್ಟ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ 2000ದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭಡ್ತಿಹೊಂದಿದರು. 2007ರಲ್ಲಿ ಉಪ್ಪಳಿಗೆ ಸರ್ಕಾರಿ ಪ್ರೌಢ ಶಾಲೆಗೆ ಪ್ರಭಾರ ಮುಖ್ಯ ಶಿಕ್ಷಕರಾಗಿ ನಿಯೋಜನೆಗೊಂಡು 2014ರಲ್ಲಿ ನಿವೃತ್ತಿ ಹೊಂದಿದರು. ಪಠ್ಯ ಪುಸ್ತಕ ರಚನೆ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಶಿಕ್ಷಣದಲ್ಲಿ ಹಿರಿಮೆಗೆ ಎರಡು ಬಾರಿ ರಾಜ್ಯ ಪುರಸ್ಕಾರ ಪಡೆದ ರಾಜ್ಯದ ಏಕೈಕ ಶಿಕ್ಷಕ ಎಂಬ ಹೆಗ್ಗಳಿಕೆಯನ್ನು ನಾರಾಯಣ ರೈ ಕುಕ್ಕುವಳ್ಳಿ ಪಡೆದಿದ್ದಾರೆ. ಮಕ್ಕಳ ಪ್ರತಿಭೆ ಮತ್ತು ಸಾಧನೆ ವಿಚಾರವಾಗಿ ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ 25 ವರ್ಷಗಳಿಂದ ಪ್ರತಿಭಾರಂಗ ಎಂಬ ಅಂಕಣವನ್ನು ನಿರ್ವಹಿಸುತ್ತಿದ್ದಾರೆ.ಇವರ ಸಾಧನೆಗೆ ಗಡಿನಾಡ ರಾಜ್ಯ ಪುರಸ್ಕಾರ, ಕನ್ನಡ ಸಾಹಿತ್ಯೋತ್ಸವ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಸಂದಿವೆ. ವ್ಯಂಗ್ಯ ಚಿತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಪುರಸ್ಕಾರಗಳೂ ಇವರಿಗೆ ಸಂದಿವೆ.
























