ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮುಜಫ್ಫರಾಬಾದ್‌ನಲ್ಲಿ ವಿದ್ಯುತ್ ದರ ಹಾಗೂ ದಿನಸಿ ಸಾಮಾನುಗಳ ದರಗಳಲ್ಲಿ ಭಾರಿ ಏರಿಕೆಯಿಂದ ತತ್ತರಿಸಿರುವ ಜನರು ನಡೆಸಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಭದ್ರತಾ ಪಡೆಗಳು, ಪ್ರತಿಭಟನಕಾರರ ಮೇಲೆ ಪ್ರಯೋಗಿಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ವಿವಾದಿತ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದ್ದ ಅರೆಸೇನಾಪಡೆಯ ರೇಂಜರ್‌ಗಳು ನಗರದಿಂದ ವಾಪಸ್ ಹೋಗುವಾಗ ಉದ್ರಿಕ್ತರು ಅವರು ಮೇಲೆ ಕಲ್ಲು ತೂರಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಅಶ್ರುವಾಯು ಮತ್ತು ಗುಂಡಿನ ದಾಳಿ ನಡೆಸಿದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರತಿಭಟನಕಾರರು ಮತ್ತು ಪ್ರಾದೇಶಿಕ ಸರಕಾರದ ನಡುವಿನ ಮಾತುಕತೆಗಳು ಬಿಕ್ಕಟ್ಟಿನಲ್ಲಿ ಕೊನೆಗೊಂಡ ನಂತರ ಈ ಪ್ರದೇಶದಲ್ಲಿ ಪರಿಹಾರ ಕ್ರಮ ಕೈಗೊಳ್ಳಲು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೋಮವಾರ 690 ಕೋಟಿ ರೂ. ಸಹಾಯಧನ ಬಿಡುಗಡೆಗೆ ಅನುಮೋದನೆ ನೀಡಿದ್ದರು. ಆದಾಗ್ಯೂ ಪಾಕ್ ಸರಕಾರದ ಈ ನಿರ್ಧಾರವು ಈ ಪ್ರದೇಶದಲ್ಲಿನ ಉದ್ವಿಗ್ನತೆ ಶಮನಗೊಳಿಸುವಲ್ಲಿ ವಿಫಲವಾಗಿದೆ. ಪಾಕಿಸ್ತಾನದಲ್ಲಿ 40 ಕೆಜಿ ಗೋಧಿ ಹಿಟ್ಟಿನ ದರವನ್ನು ಅಲ್ಲಿನ ರೂಪಾಯಿ ಮೌಲ್ಯದಲ್ಲಿ 3100 ರೂ.ನಿಂದ 2000 ರೂ.ಗೆ ಇಳಿಸಲಾಗಿದೆ. ವಿದ್ಯುತ್ ದರವನ್ನೂ ತಗ್ಗಿಸಲಾಗಿದೆ. ಆದಾಗ್ಯೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಪ್ರತಿಭಟನೆಗಳು ನಿಂತಿಲ್ಲ.
ಶುಕ್ರವಾರದಿಂದ ಈ ಪ್ರದೇಶದ ಮುಜಪ್ಟರಾಬಾದ್, ಮೀರ್‌ಪುರ, ರಾವಲ್ ಕೋಟ್, ಪೂಂಛ ಸೇರಿ ಅನೇಕ ಕಡೆ ವ್ಯಾಪಕ ಮುಷ್ಕರ ನಡೆಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಹುತೇಕ ಬಂದ್ ವಾತಾವರಣ ನಿರ್ಮಾಣವಾಗಿದ್ದು ಅಲ್ಲಲ್ಲಿ ಹಿಂಸಾಚಾರ, ಸಂಘರ್ಷಗಳೂ ನಡೆದಿವೆ. ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ.