ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಜಾಸ್ತಿ ಇದೆ. ಇದು ಸರಕಾರದ ಪತನಕ್ಕೂ ಕಾರಣವಾಗಬಹುದು. ಇದನ್ನು ಏಕನಾಥ ಶಿಂಧೆ ಇತ್ತೀಚೆಗೆ ಹೇಳಿದ್ದಾರೆ. ನಾನು ಇದನ್ನು ಮೂರು ತಿಂಗಳ ಹಿಂದೆಯೇ ಹೇಳಿದ್ದೇನೆ. ಬಿಜೆಪಿ ಆಪರೇಷನ್ ಕಮಲ ಮಾಡೋ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ನವರ ಕಚ್ಚಾಟದಿಂದಲೇ ಸರ್ಕಾರ ಬಿದ್ದು ಹೋಗಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ನಡುವೆ ಸಮನ್ವಯ ಕೊರತೆ ಇದೆ. ನಮ್ಮವರು ಯಾರೂ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಇಷ್ಟೊಂದು ಗಟ್ಟಿ ಮುಟ್ಟಾಗಿದಾರೆ ಎಂದರೆ ಏನೋ ಇದೆ ಎಂದರ್ಥ. ಈ ಹಿಂದೆ 17 ಜನ ಹೋದಾಗ ಸಿದ್ದರಾಮಯ್ಯ ಏನ್ ಹೇಳಿದ್ದರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಡಳಿತದ ಬಿಗಿ ತಪ್ಪಿ ಹೋಗಿದೆ. ರಾಜ್ಯ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ನೇಹಾ ಹಿರೇಮಠ ಕೊಲೆಯಾದ ನಂತರ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು. ಆದ್ರೆ, ಈ ಹತ್ಯೆಯನ್ನು ಪೊಲೀಸರು ಸುಲಭವಾಗಿ ತೆಗೆದುಕೊಂಡಿದ್ದರು. ಹೀಗಾಗಿ ಮನೆಗೆ ಹೋಗಿ ಅಂಜಲಿ ಹತ್ಯೆಯಾಗಿದೆ. ಇದರಿಂದಾಗಿ ಜನ ಭಯ ಭೀತರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದಕ್ಕೆಲ್ಲ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವರು ಜವಾಬ್ದಾರಿ. ಅಂಜಲಿ ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.