ಹೊಸ ವಾಹನ ಪರವಾನಗಿ ಮಾಡಿಸುವ ವೇಳೆ ಆಗಿತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಚಾಲನಾ ಪರವಾನಗಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಬದಲಾವಣೆಗಳನ್ನು ತರುವುದಾಗಿ ಘೋಷಣೆ ಮಾಡಿದೆ. ಈ ಹೊಸ ನಿಯಮಗಳು ಜಾರಿಯಾದ ಬಳಿಕ, ಯಾವುದೇ ಸಮಸ್ಯೆ ಇಲ್ಲದೆ, ಸುಲಭವಾಗಿ ಡಿಎಲ್ ಪಡೆಯಬುದಾಗಿದೆ.
ಜೂನ್ 1ರಿಂದ ಡಿಎಲ್ ನಿಯಮಗಳು ಜಾರಿಯಾಗಲಿದೆ. ಹಾಗಾದರೆ ನಿಯಮಗಳಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ. ಜೂನ್ 1ರಿಂದ ಜಾರಿಗೆ ಬರಲಿರುವ ನಿಯಮಗಳ ಪ್ರಕಾರ, ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಡ್ರೈವಿಂಗ್ ಟೆಸ್ಟ್ ನೀಡಬೇಕಾಗಿಲ್ಲ. ನೀವು ಯಾವುದೇ ಖಾಸಗಿ ಡ್ರೈವಿಂಗ್ ಸ್ಕೂಲ್‌ಗೆ ಹೋಗಿ ಡ್ರೈವಿಂಗ್ ಟೆಸ್ಟ್ ಕೊಡಬಹುದು. ಈ ಡ್ರೈವಿಂಗ್ ಸ್ಕೂಲ್‌ಗಳಿಗೆ ಟೆಸ್ಟ್ ತೆಗೆದುಕೊಳ್ಳಲು ಮತ್ತು ಲೈಸೆನ್ಸ್ ನೀಡುವ ಅಧಿಕಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.
ಇದೀಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೆಚ್ಚು ದಾಖಲೆಗಳ ಅಗತ್ಯವಿಲ್ಲ. ಡ್ರೈವಿಂಗ್ ಕಲಿಯಲು ಬಯಸುವ ವಾಹನದ ದಾಖಲೆ ನಿಮ್ಮ ಬಳಿ ಇದ್ದರೆ ಸಾಕು. ಇದರಿಂದ ಆರ್‌ಟಿಒ ಕಚೇರಿಗೆ ಭೇಟಿ ನೀಡುವ ಅಗತ್ಯ ಕಡಿಮೆ ಆದಂತಾಗುತ್ತದೆ.
ಡ್ರೈವಿಂಗ್ ಸ್ಕೂಲ್ ಬಳಿ ಕನಿಷ್ಠ 1 ಹೆಕ್ಟೇರ್ ಜಮೀನು ಇರಬೇಕು. ಅಷ್ಟೇ ಅಲ್ಲದೆ, ನಾಲ್ಕು ಚಕ್ರದ ವಾಹನಗಳ ತರಬೇತಿಗಾಗಿ 2 ಹೆಕ್ಟೇರ್ ಜಮೀನಿನ ಅವಶ್ಯಕತೆ ಇದೆ. ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಟೆಸ್ಟ್‌ಗೆ ಸೂಕ್ತ ವ್ಯವಸ್ಥೆ ಇರಬೇಕಾಗುತ್ತದೆ.
ಇನ್ನು ಡ್ರೈವಿಂಗ್ ತರಬೇತಿ ನೀಡುವ ವ್ಯಕ್ತಿ 10ನೇ ತರಗತಿ ಪ್ರಮಾಣಪತ್ರ ಮತ್ತು 5 ವರ್ಷಗಳ ಚಾಲನಾ ಅನುಭವ ಹಾಗೂ ಬಯೋಮೆಟ್ರಿಕ್ಸ್, ಚಾಲನೆಯಲ್ಲಿರುವ ಐಟಿ ವ್ಯವಸ್ಥೆಗಳ ಜ್ಞಾನವನ್ನು ಹೊಂದಿರಬೇಕಾಗುತ್ತದೆ. * 4 ವಾರಗಳಲ್ಲಿ ಮಿನಿ ವೆಹಿಕಲ್ಸ್ (LMV)ಗಾಗಿ 29 ಗಂಟೆಗಳ ತರಬೇತಿ, ಇದು 8 ಗಂಟೆಗಳ ಥಿಯೇರಿ ಮತ್ತು 21 ಗಂಟೆಗಳ ಪ್ರಾಕ್ಟಿಕಲ್ ಚಾಲನಾ ತರಬೇತಿಯನ್ನು ಒಳಗೊಂಡಿರುತ್ತದೆ. ಆದರೆ ದೊಡ್ಡ ವಾಹನಗಳಿಗೆ (HMV), ಇದು 6 ವಾರಗಳಲ್ಲಿ 38 ಗಂಟೆಗಳ ತರಬೇತಿ ಮತ್ತು 8 ಗಂಟೆಗಳ ಥಿಯೇರಿ ಮತ್ತು 31 ಗಂಟೆಗಳ ಪ್ರಾಕ್ಟಿಕಲ್ ತರಬೇತಿಯನ್ನು ಚಾಲನೆಗೆ ಒಳಗೊಂಡಿದೆ.
ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಡ್ರೈವಿಂಗ್ ಕಲಿಯುವ ಹೊಸ ಚಾಲಕರು ಉತ್ತಮ ತರಬೇತಿಯನ್ನು ಪಡೆದು, ರಸ್ತೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಬಹುದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದೇ ಆಗಿದ್ದು, https://parivahan.gov.in/ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ . ಅರ್ಜಿ ಶುಲ್ಕವು ಪರವಾನಗಿಯ ಪ್ರಕಾರದ ಮೇಲೆ ನಿರ್ಧಾರವಾಗಲಿದೆ. ಪರವಾನಗಿಯನ್ನು ಅನುಮೋದಿಸಲು ದಾಖಲೆಗಳನ್ನು ಸಲ್ಲಿಸಲು ಮತ್ತು ಚಾಲನಾ ಕೌಶಲ್ಯವನ್ನು ಪ್ರದರ್ಶಿಸಲು ಆರ್‌ಟಿಒ ಕಚೇರಿಗೆ ಭೇಟಿ ನೀಡುವುದು ಅಗತ್ಯವಾಗಿದೆ.