ಕೊಟ್ಟಾಯಂ : ಗೂಗಲ್ ಮ್ಯಾಪ್ಸ್ ಬಳಸಿ ಪ್ರಯಾಣಿಸುತ್ತಿದ್ದ ಪ್ರವಾಸಿ ತಂಡವೊಂದು ಕೇರಳದಲ್ಲಿ ಸೀದಾ ಹೋಗಿ ನದಿನೀರಿಗೆ ಇಳಿದಿದೆ. ಕಾರು ಮುಳುಗಿದೆ; ಆದರೆ ಪ್ರಯಾಣಿಕರು ಹೇಗೋ ಪಾರಾಗಿದ್ದಾರೆ. ಹೈದರಾಬಾದ್‌ನ ಪ್ರವಾಸಿ ತಂಡವೊಂದು ದಕ್ಷಿಣ ಕೇರಳ ಜಿಲ್ಲೆಯ ಕುರುಪ್ಪಂಥಾರ ಬಳಿ ನ್ಯಾವಿಗೇಟ್ ಮಾಡಲು ಗೂಗಲ್ ಮ್ಯಾಪ್‌ಗಳನ್ನು ಬಳಸುತ್ತಿತ್ತು. ಗೂಗಲ್ ಮ್ಯಾಪ್ ಅವರನ್ನು ನೀರಿನಿಂದ ತುಂಬಿಕೊಂಡಿದ್ದ ಹೊಳೆಯೊಳಗೆ ಕರೆದುಕೊಂಡು ಹೋಯಿತು. ಕಾರಿನಲ್ಲಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಆಲಪ್ಪುಳ ಕಡೆಗೆ ಹೋಗುತ್ತಿತ್ತು. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.
ಅವರು ಪ್ರಯಾಣಿಸುತ್ತಿದ್ದ ರಸ್ತೆಯ ಪಕ್ಕ ಹೊಳೆಯಿದ್ದು, ಭಾರೀ ಮಳೆಯಿಂದಾಗಿ ರಸ್ತೆ ಕೂಡ ತುಂಬಿ ಹರಿಯುತ್ತಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ಬಳಸಿ ನ್ಯಾವಿಗೇಟ್ ಮಾಡುತ್ತಿದ್ದರು. ಅದು ಅವರನ್ನು ನೇರವಾಗಿ ನೀರಿನೊಳಗೇ ಕೊಂಡೊಯ್ದಿತ್ತು!
ಹತ್ತಿರದ ಪೊಲೀಸ್ ಗಸ್ತು ಘಟಕ ಮತ್ತು ಸ್ಥಳೀಯ ನಿವಾಸಿಗಳ ರಕ್ಷಣಾ ಪ್ರಯತ್ನಗಳಿಂದ ನಾಲ್ವರು ಅಪಾಯವಿಲ್ಲದೆ ಪಾರಾಗುವಲ್ಲಿ ಯಶಸ್ವಿಯಾದರು. ಆದರೆ ಅವರ ವಾಹನ ನೀರಿನಲ್ಲಿ ಮುಳುಗಿದೆ. “ವಾಹನವನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಕಡುತುರುತಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳದಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇಬ್ಬರು ಯುವ ವೈದ್ಯರು ಹೀಗೇ ಒಂದು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರು ನಿರ್ದೇಶನಗಳನ್ನು ಅನುಸರಿಸಿ ಕಾರು ಓಡಿಸಿ ನದಿಗೆ ಬಿದ್ದಿದ್ದರು. ಈ ಘಟನೆಯ ನಂತರ, ಕೇರಳ ಪೊಲೀಸರು ಮಳೆಗಾಲದಲ್ಲಿ ಈ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಎಚ್ಚರಿಕೆಯ ಮಾರ್ಗಸೂಚಿಗಳನ್ನು ನೀಡಿದ್ದರು.