ಹೊಸದಿಲ್ಲಿ: ದೆಹಲಿ ಪ್ರವಾಸದಲ್ಲಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಕರ್ನಾಟಕ ಭವನದಲ್ಲಿ ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಭೇಟಿ ಇದೀಗ ಕುತೂಹಲ ಕೆರಳಿಸಿದೆ.ಇಂದು ಮುಂಜಾನೆ ಉಪರಾಷ್ಟ್ರಪತಿಗಳಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬ್ರೇಕ್ ಫಾಸ್ಟ್‌ಗೆ ಆಹ್ವಾನ ಬಂದಿತ್ತು. ಉಪರಾಷ್ಟ್ರಪತಿಗಳನ್ನು ಭೇಟಿಯಾದ ಚಿತ್ರವನ್ನು ನಂತರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಡಿಕೆಶಿ, “ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರನ್ನು ಇಂದು ರಾಜಭವನದಲ್ಲಿ ಸೌಹಾರ್ದಯುತವಾಗಿ ಭೇಟಿಯಾದೆ. ಈ ವೇಳೆ ಪ್ರಾದೇಶಿಕ ಹಾಗೂ ರಾಷ್ಟ್ರೀಯ ವಿಚಾರಗಳ ಕುರಿತು ಪರಸ್ಪರ ಚರ್ಚಿಸಿದೆವು” ಎಂದು ಬರೆದುಕೊಂಡಿದ್ದಾರೆ.
ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಸರಣಿ ಸಭೆಗಳನ್ನು ನಡೆಸಲು ದಿಲ್ಲಿಗೆ ಆಗಮಿಸಿದ್ದಾರೆ. ದೆಹಲಿಗೆ ಬರುತ್ತಿದ್ದಂತೆ ರಣದೀಪ್ ಸುರ್ಜೆವಾಲಾ ಜೊತೆಗೆ ಸಭೆ ನಡೆಸಿದ್ದು, ಬಳಿಕ ಕರ್ನಾಟಕ ಭವನದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದರು. ರಾತ್ರಿ 10 ಗಂಟೆಗೆ ಕೆ.ಸಿ ವೇಣುಗೋಪಾಲ್ ಜೊತೆ ಸಭೆ ನಡೆಸಿ ಸಿಎಂ ಹಾಗೂ ಡಿಸಿಎಂ ನಾಳೆ ಬೆಳಿಗ್ಗೆ ಖರ್ಗೆ ಜೊತೆಗೆ ಅಂತಿಮ ಸಭೆ ನಡೆಸಲಿದ್ದಾರೆ. ನಿರೀಕ್ಷೆಗೂ ಮೀರಿ ಆಕಾಂಕ್ಷಿಗಳ ಹೆಸರು ಪಟ್ಟಿಯಲ್ಲಿರುವುದರಿಂದ ಅಭ್ಯರ್ಥಿ ಆಯ್ಕೆ ಸಂಬಂಧ ಕಗ್ಗಂಟು ಬಗೆಹರಿಯದಾಗಿದೆ.
ಕೆಲವು ದಿನಗಳ ಹಿಂದೆ ಒಕ್ಕಲಿಗರ ಸಭೆಯಲ್ಲಿ ಮಾತನಾಡುತ್ತ ಡಿಕೆಶಿ, ತಾವು ಮುಂದಿನ ಸಿಎಂ ಆಗುವ ಬಗ್ಗೆ ಸುಳಿವನ್ನು ನೀಡಿದ್ದರು. “ಏನು ಆಗಬೇಕೆಂದಿದೆಯೋ ಅದು ದೆಹಲಿಯಲ್ಲಿ ತೀರ್ಮಾನ ಆಗಿದೆ. ಅಲ್ಲದೆ, ಸ್ವಲ್ಪ ದಿನ ಕಾಯಿರಿ” ಎಂದು ಹೇಳಿದ್ದರು. ಆ ಮೂಲಕ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.