ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಸುರತ್ಕಲ್ ಎನ್‌ಐಟಿಕೆಯಲ್ಲಿ ಜೂನ್ 4 ರಂದು ನಡೆಯಲಿದೆ. ದಕ್ಷಿಣ ಕನ್ನಡ ಲೋಸಭಾ ಕ್ಷೇತ್ರಕ್ಕೆ ಎಪ್ರಿಲ್ 26ರಂದು ಚುನಾವಣೆಯು ಯಾವುದೇ ತೊಂದರೆಗಳಿಲ್ಲದೇ ಉತ್ತಮ ಶೇಕಡಾ ವಾರು ಮತದಾನದೊಂದಿಗೆ ನಡೆದಿತ್ತು.
ವಿಜಯೋತ್ಸವ ನಿಷೇಧ:-
ಜೂನ್ 4 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿರುವ ಕಾರಣ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ12 ಗಂಟೆಯವರೆಗೆ ವಿಜಯೋತ್ಸವವನ್ನು ನಿಷೇಧಿಸಲಾಗಿದೆ. ಜೊತೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಚುನಾವಣಾ ಫಲಿತಾಂಶದ ದಿನದಂತು ವಿಜಯೋತ್ಸವ ಆಚರಣೆ ಸಂದರ್ಭ ಸಿಡಿಮದ್ದು, ಪಟಾಕಿ, ಮೆರವಣಿಗೆ,ಡಿಜೆ ಎಲ್ಲವನ್ನೂ ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ.ರವರು ತಿಳಿಸಿದ್ದಾರೆ.
ಮತ ಎಣಿಕೆ ಪ್ರಕ್ರಿಯೆಗಳು ಈ ರೀತಿ:
ಇವಿಎಂಗಳ ಮತ ಎಣಿಕೆಯು ಪ್ರತಿ ವಿಧಾನಸಭಾ ಕ್ಷೇತ್ರವಾರು ಎಂಟು ಕೊಠಡಿಗಳಲ್ಲಿ ತಲಾ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್‌ಗಳಲ್ಲಿ ನಡೆಯಲಿದೆ. ಇದರಲ್ಲಿ ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ 20 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಮತ ಎಣಿಕೆಗಾಗಿ ಚುನಾವಣಾಧಕಾರಿ ಹೊರತುಪಡಿಸಿ 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವಿಎಂ, ಅಂಚೆ ಮತ ಪತ್ರ ಸೇರಿದಂತೆ ಎಣಿಕೆ ಕೇಂದ್ರದಲ್ಲಿ ಒಟ್ಟು 554 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮತದಾನ ಲೆಕ್ಕ: ದ ಕ ಜಿಲ್ಲೆಯಲ್ಲಿ ಒಟ್ಟು ಇವಿಎಂಗಳಲ್ಲಿ 14,9,653 ಮತಗಳು ಚಲಾವಣೆಯಾಗಿದ್ದು, ವಿಶೇಷವಾಗಿ ಮನೆಯಿಂದಲೇ ಮತದಾನ, ತುರ್ತು ಸೇವೆ, ಸೇವಾ ಮತದಾರರು, ಸೇರಿದಂತೆ ಮತ ಪತ್ರಗಳ ಮೂಲಕ 8537 ಮತ ಚಲಾವಣೆಯಾಗಿದೆ. ಮುಖ್ಯವಾಗಿ ಸೇವಾ ಮತದಾರರಿಗೆ ಒಟ್ಟು 536 ಮತಪತ್ರಗಳನ್ನು ಕಳುಹಿಸಲಾಗಿದ್ದು, ಈವರೆಗೆ 231 ಮತಪತ್ರಗಳು ಸ್ವೀಕೃತವಾಗಿದೆ ಮತ ಎಣಿಕೆ ಆರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸ್ವೀಕೃತವಾಗುವ ಸೇವಾ ಮತದಾರರ ಮತಪತ್ರ ಗಳನ್ನು ಸ್ವೀಕರಿಸಲಾಗುತ್ತದೆ. ಸಂಖ್ಯೆ 1950 ಕರೆ ಮಾಡಿ ಮತ ಎಣಿಕೆಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.