ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಪ್ರಾಬಲ್ಯ ಇರುವ ರಾಜ್ಯಗಳಲ್ಲೇ ಅಭೂತಪೂರ್ವ ಮುನ್ನಡೆ ಸಿಕ್ಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಗಳ ಯಶಸ್ಸು ಇಂಡಿಯಾ ಕೂಟದ ಮುನ್ನಡೆಗೆ ಪ್ರಮುಖ ಅಂಶವಾಗಿದೆ. ಜೊತೆಗೆ ಉತ್ತರಪ್ರದೇಶದಲ್ಲಿ ಯಾದವ, ಮುಸ್ಲಿಮರ ಮತಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಎಸ್ಪಿ ಮುಖಂಡ ಅಖಿಲೇಶ್, 4 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸಿದ್ದರು. ಜೊತೆಗೆ ಬಿಎಸ್ಪಿ ಪಾಲಾಗುತ್ತಿದ್ದ ಮತಗಳು ಈ ಬಾರಿ ಎಸ್ಪಿ, ಕಾಂಗ್ರೆಸ್ಗೆ ದೊರೆತಿವೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕರ ಸಂವಿಧಾನ ಬದಲಾವಣೆ ಹೇಳಿಕೆಗಳು ಇಂಡಿಯಾ ಮಿತ್ರಕೂಟಕ್ಕೆ ಪ್ಲಸ್ ಆಗಿದೆ. ಪಂಜಾಬ್, ಉತ್ತರ ಪ್ರದೇಶದಲ್ಲಿ ರೈತರ ಹೋರಾಟಗಳು ಕೂಡ ಇಂಡಿಯಾ ಮುನ್ನಡೆಗೆ ಕಾರಣವಾಗಿವೆ. ಇದರ ಜೊತೆಗೆ ದೇಶಾದ್ಯಂತ ‘ಗ್ಯಾರಂಟಿ’ ಘೋಷಣೆಗಳು ಕೂಡ ಇಂಡಿಯಾ ಬಣಕ್ಕೆ ಅಲ್ಪ ಮಟ್ಟಿನ ನೆರವಾಗಿದೆ.
ಅಖಿಲೇಶ್ ಯಾದವ್, ರಾಹುಲ್, ಪ್ರಿಯಾಂಕಾ ಜೋಡಿ ಪ್ರಚಾರವೂ ಕೂಡ ಇಂಡಿಯಾ ಕೂಟಕ್ಕೆ ಮುನ್ನಡೆ ತಂದಿದೆ. ಶಿವಸೇನೆ, ಎನ್ಸಿಪಿ ಇಬ್ಭಾಗದಿಂದ ಉದ್ಧವ್ ಠಾಕ್ರೆ, ಶರದ್ ಪವಾರ್ ಜನರ ಅನುಕಂಪ ಗಿಟ್ಟಿಸಿದ್ದರು. ಜೊತೆಗೆ ತಮಿಳುನಾಡಲ್ಲಿ ಕಾಂಗ್ರೆಸ್, ಡಿಎಂಕೆ ಜಂಟಿಯಾಗಿ ಹೋರಾಡಿದ್ದು ಕೂಡ ಇಂಡಿಯಾ ಕೂಟಕ್ಕೆ ಶಕ್ತಿ ನೀಡಿದೆ.
ಆಡಳಿತ ವಿರೋಧಿ ಅಲೆ ಜೊತೆಗೆ ಮೈತ್ರಿಕೂಟದ ಪಕ್ಷಗಳು ಗೊಂದಲವಿಲ್ಲದೆ ಸಾಥ್ ನೀಡಿದ್ರಿಂದ ‘ಇಂಡಿಯಾ’ ಮುನ್ನಡೆ ಸಾಧಿಸಿದೆ. ಜೊತೆಗೆ ಚುನಾವಣಾ ಱಲಿಯಲ್ಲಿ ಮೋದಿ ವಿಫಲತೆ ಬಗ್ಗೆ ಮನವರಿಕೆ ಮಾಡಿದ್ದು, ನಿರುದ್ಯೋಗ, ಆರ್ಥಿಕ ಆತಂಕ, ರೈತರ ಸಂಕಷ್ಟ ಬಗ್ಗೆ ಪ್ರಸ್ತಾಪಿಸಿದ್ದು, ರಾಯ್ಬರೇಲಿಯಲಿ ರಾಹುಲ್ ಸ್ಪರ್ಧೆ ಚಿತ್ರಣವನ್ನೆ ಬದಲಿಸಿತು. ಇದು ಕೂಡ ಇಂಡಿಯಾ ಮೈತ್ರಿಕೂಟಕ್ಕೆ ಮುನ್ನಡೆ ತಂದುಕೊಟ್ಟಿದೆ.
ಲೋಕಸಭೆ ಚುನಾವಣಾ ಫಲಿತಾಂಶ ಹೊರರಬರ್ತಿದ್ದಂತೆ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದು, ದೇಶದ ಜನ ಮೋದಿ ಜೀ ಅವರನ್ನ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ. ಚಾರ್ ಸೋ ಪಾರ್’ ಓಟಕ್ಕೆ ಬ್ರೇಕ್ ಹಾಕುವಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಯಶಸ್ವಿಯಾಗಿದೆ. ‘ಇಂಡಿಯಾ’ ಕೂಟ 233 ಸ್ಥಾನಗಳಲ್ಲಿ ವಿಜಯಪತಾಕೆ ಹಾರಿಸಿದೆ. ಅದರಲ್ಲಿ ಕಾಂಗ್ರೆಸ್ ಪಕ್ಷವೂ 100 ಸ್ಥಾನಗಳಲ್ಲಿ ಗೆದ್ದಿದ್ದು, ಕೈ ನಾಯಕರು ಉತ್ಸಾಹದಿಂದ ಬೀಗುವಂತೆ ಮಾಡಿದೆ.