ಬೆಂಗಳೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದೇ ಕಾರಿನಲ್ಲಿ ಇಬ್ಬರೂ ಒಟ್ಟಿಗೆ ಬಂದು ಅರ್ಜಿ ಸಲ್ಲಿಸಿ ಖುಷಿಯಾಗಿಯೇ ವಾಪಸ್ ಹೊರಟ್ಟಿದ್ದಾರೆ. ಮಗು ವಿಚಾರಕ್ಕೆ ಸಂಬಂಧ ಪಟ್ಟಂತೆ ಡಿವೋರ್ಸ್‌ಗೆ ಮುಂದಾಗಿದೆ ಈ ದಂಪತಿ. ಮಗು ಈಗಲೇ ಬೇಡ ಎಂದು ನಿವೇದಿತಾ ಕೌಟುಂಬಿಕ ನ್ಯಾಯಾಲಯದ ಮಧ್ಯಸ್ಥಿಕೆ ಸಂದರ್ಭದಲ್ಲಿ ಹೇಳಿದ್ದಾರೆ.
ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್ 6ರಂದು ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಮಿಡಿಯೆಟರ್ ಸಂಧಾನಕ್ಕೆ ಕೊನೆಗೂ ದಂಪತಿ ಒಪ್ಪಿಲ್ಲ. ಡಿವೋರ್ಸ್ ಪಡೆದುಕೊಂಡರೂ ಜೀವನಾಂಶ ಬೇಡ ಎಂದಿದ್ದಾರೆ ನಿವೇದಿತಾ. ಡಿವೋರ್ಸ್ ಸಿಕ್ಕ ನಂತರ ನಿವೇದಿತಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ (ಕೇಸ್ ನಂಬರ್-Mc 3388-/2024) ಕೋರ್ಟ್ ಮುಂದಕ್ಕೆ ಬಂದಿತ್ತು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಜ್ಯೋತಿ ಶ್ರೀ ಅವರು ಬೆಂಚ್ ಮುಂದೆ ಈ ಪ್ರಕರಣ ಬಂದಿತ್ತು. ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಒಳಪಡಬೇಕಾಯಿತು.ಮೀಡಿಯೇಷನ್ ಸೆಂಟರ್ನಲ್ಲಿ ವಿಚ್ಛೇದನ ನೀಡದಂತೆ ಸಲಹೆ ಕೊಡುತ್ತಾರೆ. ಪರಸ್ಪರ ಒಂದಾಗಿ ಬಾಳಿ ಎಂದು ಸಲಹೆ ನೀಡುತ್ತಾರೆ. ಇಬ್ಬರು ಒಪ್ಪದೇ ಇದ್ದರೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ. ಬಳಿಕ ನ್ಯಾಯಾಧೀಶರು ನಿರ್ಧಾರದ ಬಗ್ಗೆ ಕೇಳುತ್ತಾರೆ. ಬಳಿಕ ವಿಚ್ಛೇದನಕ್ಕೆ ಒಪ್ಪಿಗೆ ಕೊಡುತ್ತಾರೆ.