ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮವೊಂದರಲ್ಲಿ ಮಂಗಳವಾರ ತಡರಾತ್ರಿ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಅರೆಸೇನಾಪಡೆಯ ಯೋಧರೊಬ್ಬರು ಕೂಡ ಸಾವನ್ನಪ್ಪಿದ್ದಾರೆ. ಜಮ್ಮುವಿನಲ್ಲಿ ರಾತ್ರೋರಾತ್ರಿ ಆರಂಭವಾದ ಎನ್‌ಕೌಂಟರ್‌ಗಳು ಬೆಳಗಿನ ಜಾವದವರೆಗೂ ನಡೆದಿದೆ. ಅಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಸೇನಾ ಪೋಸ್ಟ್‌ನ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಜಮ್ಮುವಿನಲ್ಲಿ ಈ 2 ಭಯೋತ್ಪಾದಕ ಘಟನೆಗಳು ನಡೆಯುವ ಕೇವಲ 2 ದಿನಗಳ ಮೊದಲು, ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ರಿಯಾಸಿಯಲ್ಲಿ ದಾಳಿಗೆ ಒಳಗಾಗಿತ್ತು. ಗುಂಡಿನ ದಾಳಿಯಿಂದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿತ್ತು. ಈ ವೇಳೆ 9 ಪ್ರಯಾಣಿಕರು ಸಾವನ್ನಪ್ಪಿದ್ದರು ಮತ್ತು 30 ಜನ ಗಾಯಗೊಂಡಿದ್ದಾರೆ. ಕಥುವಾದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಇಂದು ಬೆಳಿಗ್ಗೆ ಎನ್‌ಕೌಂಟರ್‌ಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.