ಕುವೈತ್ ಸಿಟಿ: ಕುವೈತ್‌ನ ಮಂಗಾಫ್ ನಗರದಲ್ಲಿರುವ ಆರು ಮಹಡಿಯ ಬೃಹತ್ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಎಲ್ಲ 41 ಮಂದಿಯೂ ಭಾರತೀಯರೇ ಎಂಬ ಮಾಹಿತಿ ಲಭ್ಯವಾಗಿದೆ. ಆರು ಮಹಡಿಯ ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿದೆ. ಇದರಿಂದಾಗಿ 41 ಭಾರತೀಯರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ದುರ್ಘಟನೆ ಸಂಭವಿಸುತ್ತಲೇ ಕುವೈತ್ ಪ್ರಧಾನಿ ಶೇಖ್ ಫಹಾದ್ ಯುಸುಫ್ ಸೌದ್ ಅಲ್-ಸಬಾಹ್ ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದುರಂತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಕುವೈತ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸುಮಾರು 11 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ಅಗತ್ಯ ನೆರವು ನೀಡಲು ಕೂಡ ಕ್ರಮ ತೆಗೆದುಕೊಂಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕೂಡ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರ ಎಂದು ತಿಳಿದುಬಂದಿದೆ.
ವರದಿಯ ಪ್ರಕಾರ, ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭಗೊಂಡಿತ್ತು. ಬೆಂಕಿಯನ್ನು ನೋಡಿದ ನಂತರ ಕೆಲವರು ಅಪಾರ್ಟ್ಮೆಂಟ್ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತಪಟ್ಟವರಲ್ಲಿ ಹೆಚ್ಚಿನವರು ಕೇರಳ ಹಾಗೂ ತಮಿಳುನಾಡಿನವರಾದರೆ, ಉಳಿದವರು ಉತ್ತರ ಭಾರತದವರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕುವೈತ್‌ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಭಾರತೀಯರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸಂತಾಪ ಸೂಚಿಸಿದ್ದಾರೆ.