ರಾಯಚೂರು: ಅಯೋಧ್ಯೆಯಲ್ಲಿ ಅಭ್ಯರ್ಥಿಯ ಆಯ್ಕೆ ಸರಿಯಿಲ್ಲವಾದದ್ದರಿಂದ ಬಿಜೆಪಿಗೆ ಸೋಲಾಗಿದೆ. ಮಾತ್ರವಲ್ಲ ಬಹುತೇಕ ಕಡೆ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆ ಸರಿ ಇರಲಿಲ್ಲ ಎಂದು ರಾಮಜನ್ಮಭೂಮಿ ವಿಶ್ವಸ್ಥ ಮಂಡಳಿಯ ಸದಸ್ಯರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ರಾಮಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಮಲ ಪಕ್ಷಕ್ಕೆ ರಾಮಜನ್ಮಭೂಮಿಯಾದ ಅಯೋಧ್ಯೆ ಇರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸೋಲಾಯಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಪ್ರಶ್ವೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಅಯೋಧ್ಯೆಯಲ್ಲಿ ಬಿಜೆಪಿ ಸೋತಿದೆ ಹೌದು. ಅಲ್ಲಿ ಅಭ್ಯರ್ಥಿಗಳ ಆಯ್ಕೆ ಸರಿಯಿರಲಿಲ್ಲ ಎಂಬ ಕಾರಣಕ್ಕೆ ಹಿನ್ನಡೆಯಾಗಿದೆ ಎಂದರು. ಇನ್ನು ಅನೇಕ ಕಡೆ ಇದೇ ರೀತಿ ಆಗಿದೆ ಎಂಬ ಮಾತನ್ನೂ ಈ ಸಂದರ್ಭದಲ್ಲಿ ಅವರು ಒತ್ತಿ ಹೇಳಿದರು. ಹಿಂದೂ ಸಂಘಟನೆಗಳ ದೀರ್ಘ ಕಾಲದ ಹೋರಾಟ ಫಲವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ರಾಮರಾಜ್ಯದ ಪರಿಕಲ್ಪನೆಯಂತೆ ಸಮಾಜದ ಕ್ಷೇಮವನ್ನು ಮಾಡಲಿ ಎಂದು ಕಿವಮಾತು ಹೇಳಿದರು. ಇದೇವೇಳೆ ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಬಲಾತ್ಕಾರದಿಂದ ಆಗುವ ಕಾರ್ಯವಲ್ಲ. ಮಾನಸಿಕವಾಗಿ ಜನತೆಗೆ ಹಾಗೆ ಯಾಕೆ ಮಾಡ್ತಿದ್ದಾರೆ ಅನ್ನೋದು ಗುರುತಿಸಲಿ. ಮೂಲಭೂತ ತೊಂದರೆಗಳು ಆದ್ರೂ ಏನೆಂದು ಅವುಗಳನ್ನ ದಮನಿಸಲಿ ಎಂದು ಆಶಿಸಿದರು. ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾಪನೆ ಬಳಿಕ ರಾಯಚೂರಿಗೆ ಬಂದಿರುವೆ. 60 ವರ್ಷಗಳು ತುಂಬಿರೋ ಹಿನ್ನೆಲೆ ಧನ್ವಂತರಿ ಯಾಗದಲ್ಲಿ ಭಾಗಿಯಾಗಿರುವೆ. ಬಹುಮತ ಸರಕಾರ ಇರುವಾಗಲೇ ಸರಕಾರದಿಂದ ನಯಾ ಪೈಸೆ ತೆಗೆದುಕೊಂಡಿಲ್ಲ. ಇನ್ನೂ NDA ಸರಕಾರದಿಂದ ಅನುದಾನದ ಬಗ್ಗೆ ಯೋಚನೆಯಿಲ್ಲ ಎಂದು ತಿಳಿಸಿದರು.