ಕಾರ್ಕಳ:ಪರಶುರಾಮ ಥೀಮ್ ಪಾರ್ಕ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.ಹಣ ಪಡೆದು ನಕಲಿ ಮೂರ್ತಿ ನಿರ್ಮಾಣ ಮಾಡಿದ್ದಾರೆ ಎಂದು ಬೈಲೂರು ಪರಶುರಾಮ ಮೂರ್ತಿ ತಯಾರಿಸಿದ ಕ್ರಿಶ್ ವುಡ್ ವರ್ಲ್ಡ್ ನ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪರಶುರಾಮ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ದೂರನ್ನು ನೀಡಿದ್ದಾರೆ.ಆರೋಪಿ ಕೃಷ್ಣ ನಾಯಕ್ ಉಡುಪಿ ನಿರ್ಮಿತಿ ಕೇಂದ್ರದಿಂದ 1,25,50000/- ಹಣ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದು,ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆಯನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2024 ಕಲಂ: 420, 409 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
“ನಕಲಿ ಪರಶುರಾಮ ಮೂರ್ತಿಯನ್ನು ತರಾತುರಿಯಲ್ಲಿ ಅಲ್ಲಿ ನಿಲ್ಲಿಸಿ ಹಿಂದೂ ಸಮಾಜಕ್ಕೆ ದ್ರೊಹ ಮಾಡಿದ್ದನ್ನು ನಾವು ಸಹಿಸಲು ಸಾಧ್ಯವಿಲ್ಲ.ಅಲ್ಲಿ ನಕಲಿ ಮೂರ್ತಿಯನ್ನು ನಿಲ್ಲಿಸಿದ್ದು ಯಾಕಾಗಿ ಮತ್ತು ಯಾರ ಒತ್ತಡದಲ್ಲಿ ಎಂದು ಜನತೆಗೆ ಮೂರ್ತಿ ನಿರ್ಮಾಣಕಾರರಾದ ಕೃಷ್ಣ ನಾಯಕ್ ಸ್ಪಷ್ಟವಾಗಿ ತಿಳಿಸಬೇಕು ಮತ್ತು ಈ ಬಗ್ಗೆ ನಾಡಿನ ಜನರಲ್ಲಿ ಕ್ಷಮೆಯಾಚಿಸಬೇಕು.
ಮುಂದಿನ ದಿನಗಳಲ್ಲಿ ಸಮಾಜದ ಹಿರಿಯ ಧಾರ್ಮಿಕ ಮುಖಂಡರು ಹಾಗೂ ಎಲ್ಲಾ ವರ್ಗದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ನಕಲಿ ಮೂರ್ತಿಯನ್ನು ತೆರವುಗೊಳಿಸಿ ಅಸಲಿ ಕಂಚಿನ ಮೂರ್ತಿಯನ್ನು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಸ್ಥಾಪನೆ ಮಾಡುವುದು ನಮ್ಮ ಉದ್ದೇಶ.”
ಎಂದು ಪರಶುರಾಮ ಹಿತರಕ್ಷಣಾ ಸಮಿತಿಯ ಕೃಷ್ಣ ಶೆಟ್ಟಿ ಬಜಗೋಳಿ ತಿಳಿಸಿದರು.