ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪ, ಭಾರೀ ಮಳೆಯಿಂದ ದ.ಕ.ಜಿಲ್ಲೆಯ ವಿವಿಧೆಡೆ ಏಳು ಮಂದಿ ಮೃತಪಟ್ಟಿರುವರ ವಿಚಾರ ಖೇದಕರ. ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ವ್ಯಕ್ತಪಡಿಸುವುದಾಗಿ ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಮನೆ ಮೇಲೆ ತಡೆಗೋಡೆ ಕುಸಿದು ಒಂದೇ ಕುಟುಂಬದ ಮಹಮ್ಮದ್ ಯಾಸೀರ್, ಮರಿಯಮ್ಮ, ರಿಫಾನಾ, ಆಶಿಯಾ ರಿಯಾನಾ, ಮಂಗಳೂರಿನ ಪಾಂಡೇಶ್ವರ ರೊಸಾರಿಯೊ ಚರ್ಚ್ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತರಾದ ರಾಮಕುಂಜದ ದೇವರಾಜ್, ಹಾಸನದ ರಾಜು ಹಾಗೂ ಬೆಳ್ತಂಗಡಿ ತಾಲೂಕಿನ ಶಿಬಾಜಿ ಗ್ರಾಮದ ಬರ್ಗುಳದಲ್ಲಿ ವಿದ್ಯುತ್ ಆಘಾತದಿಂದ ಮೃತಪಟ್ಟ ಪ್ರತೀಕ್ಷಾ ಶೆಟ್ಟಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ.
ಮೂರು ಘಟನೆಯ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿ ಮಾತುಕತೆ ನಡೆಸಿದ್ದು, ಮೃತರ ಕುಟುಂಬಸ್ಥರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಜಿಲ್ಲೆಯಲ್ಲಿ ವಿದ್ಯುತ್ ದುರ್ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.