ರಾಯಚೂರು: ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಆಚರಣೆ ವೇಳೆ ದುರ್ಘಟನೆಯೊಂದು ನಡೆದಿದೆ. ಮಂಗಳವಾರ ಮೊಹರಂ ಆಚರಣೆ ವೇಳೆ ಕೆಂಡ ಹಾಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಮೊಹರಂ ಆಚರಣೆ ವೇಳೆ ದೇವರು ಹೊತ್ತವರು ಅಗ್ನಿ ಹಾಯುವುದು ಸಂಪ್ರದಾಯ. ಅಷ್ಟೆ ಅಲ್ಲ ದೇವರಲ್ಲಿ ಬೇಡಿಕೆ ಈಡೇರಿದಾಗಲೂ ಕೆಲವರು ಬೆಂಕಿ ಹಾಯುತ್ತಾರೆ. ಹೀಗಾಗಿ ಮೊಹರಂ ಹಬ್ಬದ ಹಿನ್ನೆಲೆ ಮಸ್ಕಿ ತಾಲ್ಲೂಕಿನ ಬೊಮ್ಮನಾಳ ಗ್ರಾಮದಲ್ಲಿ 45 ವರ್ಷದ ಯಮನಪ್ಪ ನಾಯಕ್ ಅವರು ಕೆಂಡ ಹಾಯಲು ಮುಂದಾಗಿದ್ದರು. ಈ ವೇಳೆ ಆಯತಪ್ಪಿ ಕೊಂಡಕ್ಕೆ ಬಿದ್ದಿದ್ದಾರೆ.
ಕೊಂಡಕ್ಕೆ ಬಿದ್ದ ಯಮನಪ್ಪ ಅವರನ್ನು ರಕ್ಷಿಸಲು ಮುಂದಾದ ಗ್ರಾಮಸ್ಥರು, ಬೆಂಕಿ ಆರಿಸಲು ನೀರು ಹಾಕಿದ್ದಾರೆ. ಅಷ್ಟರಲ್ಲಾಗಲೆ ಯಮನಪ್ಪ ಅವರ ದೇಹ ಭಾಗಶಃ ಸುಟ್ಟುಹೋಗಿತ್ತು. ಅವರು ಕೊಂಡಕ್ಕೆ ಬಿದ್ದು ನರಳಾಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಇನ್ನು ಘಟನೆ ಕುರಿತಂತೆ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.