ಬೆಂಗಳೂರು:ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ 9 ಜನರ ಪೈಕಿ 8 ಜನರ ಶವ ಪತ್ತೆಯಾಗಿದೆ.
ದಿನದಿಂದ ದಿನಕ್ಕೆ ಮೃತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಇದೀಗ ದುರಂತದಲ್ಲಿ ನಾಪತ್ತೆಯಾಗಿದ್ದ ಮೈಸೂರು ಮೂಲದ ಗುರುಮಲ್ಲನ್(60), ಸಾವಿತ್ರಿ (Savitri) (54), ಶಿವಣ್ಣ(50), ಅಪ್ಪಣ್ಣ(39), ಅಶ್ವಿನಿ(13), ಜೀತು(11), ದಿವ್ಯಾ(35), ಶ್ರೇಯಾ(19) ಎಂಬುವರ ಮೃತದೇಹ ಪತ್ತೆ ಆಗಿದೆ. ಮೃತರ ಸಾವಿನ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಖಚಿತ ಪಡಿಸಿದ್ದಾರೆ.
ಸುಮಾರು 60 ವರ್ಷಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದ ಮಾದೇವಿ ಎಂಬುವವರ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಸವಿತಾ ಎಂಬುವವರ ಶವಕ್ಕಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದ್ದಾರೆ. ಕೇರಳದ ವಯನಾಡು ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚೂರಲ್‌ಮಲಾ, ಮುಂಡಕೈನಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, 49 ಮಕ್ಕಳು ಸೇರಿದಂತೆ ಇನ್ನೂ 296 ಜನ ನಾಪತ್ತೆಯಾಗಿದ್ದಾರೆ. ಇದರ ನಡುವೆ ಚೂರಲ್‌ಮಲಾದ ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನ ಸೇನೆ ರಕ್ಷಿಸಿದೆ. ನಾಲ್ಕು ದಿನ ಅನ್ನ, ನೀರು ಇಲ್ಲದೆ ಜೀವ ಉಳಿಸಿಕೊಂಡವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ.
ಅಷ್ಟಕ್ಕೂ ಈ ದುರಂತದಲ್ಲಿ ನೂರಾರು ಸಾವು ಆಗೋಕೆ ಕಾರಣವೇ 100 ಕಿಲೋ ಮೀಟರ್ ವೇಗದಲ್ಲಿ ಕೊಚ್ಚಿ ಬಂದ ಇಂಥಾ ಬೃಹತ್ ಬಂಡೆಗಳು. ಚೂರಲ್‌ಮಲಾದ ಶಾಲಾ ಆವರಣದಲ್ಲಿ ಎನ್‌ಡಿಆರ್‌ಎಫ್ ಹಾಗು ಶ್ವಾನದಳದಿಂದ ಪತ್ತೆ ಕಾರ್ಯ ನಡೆದಿದೆ. ಕೆಸರಿನ ನಡುವೆ ಸಿಲುಕಿದ್ದ ಶವಗಳನ್ನ ರಕ್ಷಣಾ ತಂಡ ಹೊರ ತೆಗೆದಿದೆ. ಮೆಪ್ಪಾಡಿಯ ಕಮ್ಯುನಿಟಿಹಾಲ್ ನಲ್ಲಿದ್ದ ಶವಗಳನ್ನು ಮಹದೇವಮ್ಮ ಗುರುತಿಸಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಿರ್ಧಾರ ಮಾಡಲಾಗಿದೆ.
ಮಹದೇವಮ್ಮ ಕುಟುಂಬ ಮೂಲತಃ ಮೈಸೂರು ಜಿಲ್ಲೆ ಟಿ.ನರಸೀಪುರದ ಉಕ್ಕಲಗೇರಿ ಗ್ರಾಮದವರು. ಕಳೆದ ಹಲವು ವರ್ಷಗಳಿಂದ ಮಹದೇವಮ್ಮ ಕುಟುಂಬ ಭೂಕುಸಿತವಾದ ಚೂರಲ್‌ಮಾಲದಲ್ಲಿ ವಾಸವಿತ್ತು. ನಿನ್ನೆಯಷ್ಟೇ ಗಂಜಿ ಕೇಂದ್ರದಲ್ಲಿ ಮಹದೇವಮ್ಮ ಅವರನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಮಹದೇವಮ್ಮ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು.