ಒಂದು ಕಡೆ ಭಾರತ ಚೀನಾದಂತಹ ದೇಶಗಳು ಜನಸಂಖ್ಯೆಯ ಏರಿಕೆಯಿಂದ ಕಂಗೆಟ್ಟು ಹೋಗಿದ್ದರೆ ಇನ್ನೊಂದು ಕಡೆ ಜಪಾನ್ ಜನಸಂಖ್ಯಾ ಕುಸಿತದಿಂದ ಮರುಗಿಹೋಗಿದೆ. ಕಳೆದ 14 ವರ್ಷಗಳಿಂದ ಇಲ್ಲಿ ಜನನ ಪ್ರಮಾಣಕ್ಕಿಂತ ಹೆಚ್ಚಾಗಿ ಮರಣ ಪ್ರಮಾಣ ದಾಖಲೆಯಾಗುತ್ತಲೇ ಇದೆ.
2024ರ ಜನವರಿಯ ಲೆಕ್ಕಾಚಾರದಲ್ಲಿ ಜಪಾನ್‌ನ ಒಟ್ಟು ಜನಸಂಖ್ಯೆ 12.49 ಕೋಟಿಗೆ ಕುಸಿತ ಕಂಡಿದೆ. ಉದಾಹರಣೆಗೆ ನಮ್ಮ ದೇಶದ ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಜನಸಂಖ್ಯೆಯೇ 24 ಕೋಟಿ ಇದೆ.
ಜಪಾನ್ ನಲ್ಲಿ ಜನಸಂಖ್ಯೆ ಕುಸಿಯಲು ಕಾರಣ
ಜಪಾನ್ ಜನರು ಮದುವೆ ಮಾಡಿಕೊಳ್ಳಲು ಮತ್ತು ಮಕ್ಕಳು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವ ಕಾರಣ ಜನಸಂಖ್ಯೆ ಗಣನೀಯವಾಗಿ ಕುಸಿತ ಕಂಡು ಬರುತ್ತಿದೆ. ಇದೇ ರೀತಿ ಮುಂದುವರೆದರೆ 2070ರ ವೇಳೆಗೆ ದೇಶದ ಜನಸಂಖ್ಯೆಯು ಶೇ. 30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದು 5.8 ಕೋಟಿಗೆ ತಲುಪಬಹುದು. ಆಗ 10 ಜನರಲ್ಲಿ ನಾಲ್ಕು ಮಂದಿ 65 ವರ್ಷದ ಮೇಲ್ಪಟ್ಟವರಾಗಿರಲಿದ್ದಾರೆ. ಹಾಗಾಗಿಯೇ ಜಪಾನ್‌ಗೆ ಇದು ತಲೆನೋವಿನ ವಿಚಾರವಾಗಿದೆ.
ಉದ್ಯೋಗ ಅವಕಾಶಗಳಲ್ಲಿ ಇಳಿಕೆಯಾಗಿ ಸಂಬಳದಲ್ಲಿನ ಏರಿಕೆಯನ್ನೂ ಮೀರಿ ಹೆಚ್ಚುತ್ತಿರುವ ಜೀವನ ವೆಚ್ಚ ಜಪಾನಿಗರನ್ನು ಮನೆ, ಸಂಸಾರದ ನೊಗ ಹೊರದಂತೆ ಮಾಡಿದೆ. ಜೊತೆಗೆ ದೇಶದಲ್ಲಿ ಹಬ್ಬಿರುವ ಕಾರ್ಪೊರೇಟ್ ಸಂಸ್ಕೃತಿ, ಮಹಿಳೆಯರು ಮತ್ತು ನೌಕರಸ್ಥ ಮಹಿಳೆಯರಿಗೆ ಮಕ್ಕಳು ಹೊರೆಯಾಗುತ್ತಿರುವುದು ಜನಸಂಖ್ಯೆ ಕುಸಿತಕ್ಕೆ ಕಾರಣ ಎಂದು ಗುರುತಿಸಲಾಗಿದೆ.
ಸರ್ಕಾರದ ಯೋಜನೆ ಹೇಗೆ ಪ್ರೋತ್ಸಾಹ ನೀಡುತ್ತಿದೆ ?
ಸತತ 14 ವರ್ಷಗಳಿಂದ ಜನಸಂಖ್ಯೆ ಇಳಿಯುತ್ತಿರುವುದರಿಂದ ಜಪಾನ್ ಸರಕಾರ ದೇಶದ ಜನಸಂಖ್ಯೆ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಕ್ಕಳಾಗುವ ದಂಪತಿಗಳಿಗೆ ಪ್ರೋತ್ಸಾಹಧನವಾಗಿ ನೀಡಲು ಬಜೆಟ್‌ನಲ್ಲಿ ಬರೋಬ್ಬರಿ 5.30 ಟ್ರಿಲಿಯನ್ ಯೆನ್ (ಭಾರತೀಯ ರೂಪಾಯಿ ಲೆಕ್ಕದಲ್ಲಿ 2.85 ಲಕ್ಷ ಕೋಟಿ ರೂ.) ಹಣವನ್ನು ಮೀಸಲಿಟ್ಟಿತ್ತು. ಆದರೆ ಈ ಕ್ರಮ ಯಾವುದೇ ಫಲಕೊಟ್ಟಿಲ್ಲ.