ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸುತ್ತಾ ಮುಡಾ ಹಗರಣದ ಆರೋಪ ಆವರಿಸಿಕೊಂಡಿದೆ. ವಿರೋಧ ಪಕ್ಷದ ನಾಯಕರು ಕುಂತಲ್ಲಿ, ನಿಂತಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಮುಡಾ ಕೇಸ್ ಕಾವು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರು ದಿಢೀರ್ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಖರ್ಗೆ ಅವರ ಜೊತೆ ಸತೀಶ್ ಜಾರಕಿಹೊಳಿ ರಹಸ್ಯ ಚರ್ಚೆ ನಡೆಸಿರುವುದು ತೀವ್ರ ಸಂಚಲನ ಸೃಷ್ಟಿಸಿದೆ. ದಲಿತ ಸಚಿವರೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಜಾರಕಿಹೊಳಿ ಹಾಗೂ ಖರ್ಗೆಯವರ ಭೇಟಿ ಮಹತ್ವ ಪಡೆದುಕೊಂಡಿದೆ.
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಭೇಟಿಯಾಗಿರುವ ಸತೀಶ್ ಜಾರಕಿಹೊಳಿ, ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಡಾ ಪ್ರಕರಣದಲ್ಲಿ ನಾವು ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದೇವೆ. ಪ್ರತಿ ಹಂತದಲ್ಲೂ ನಾವು ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಎದುರಾದರೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ನಾಯಕರಿಗೆ ಸಿಎಂ ಸ್ಥಾನ ಸಿಗಬೇಕು. ಇದಕ್ಕೆ ನಾವೆಲ್ಲ ಒಗ್ಗಟ್ಟಾಗಿ ನಿಂತು ಸಿಎಂ ಸ್ಥಾನವನ್ನು ಸಮುದಾಯಕ್ಕೆ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಖರ್ಗೆ ಅವರ ಜೊತೆಗೆ ಚರ್ಚೆ ನಡೆದಿದೆ ಎಂದು ತಿಳಿದ ಬಂದಿದೆ.



 
                                









 
			










 
		