ಭಾರತೀಯರ ಸಂಭ್ರಮವೇ ಹಬ್ಬಗಳಲ್ಲಿದೆ. ಹಬ್ಬ ಹರಿದಿನಗಳು ಆವರಣೆಯ ಜೊತೆಗೆ ಸಂಸ್ಕಾರವನ್ನು ಕಲಿಸುತ್ತವೆ. ಹಾಗೆಯೇ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಜಾಗೃತಿ ಗೊಳಿಸುವ ಪಾಠ ಹೇಳುತ್ತವೆ.
ಹಚ್ಚಿಟ್ಟ ಹಣತೆಯ ಸಾಲು ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನಜ್ಯೋತಿಯನ್ನು ನಮ್ಮ ಮೆದುಳಿಗೆ ತುಂಬಿಸುವಲ್ಲಿ ಸಹಕಾರಿಯಾಗಿದೆ. ಹಿಂದೂ ಧರ್ಮದ ನಂಬಿಕೆ ಆಚರಣೆಗಳೆಲ್ಲವೂ ದೀಪಜ್ಯೋತಿಯೊಂದಿಗೆ ಸೇರಿಕೊಂಡಿದೆ. ಬೆಳಗೆದ್ದು ಸೂರ್ಯ ಜ್ಯೋತಿಗೆ ನಮಸ್ಕರಿಸಿ, ದೇವರಿಗೆ ದೀಪ ಬೆಳಗಿ, ಅಡುಗೆ ಮನೆಯಲ್ಲಿ ಅಗ್ನಿ ಜ್ಯೋತಿಗೆ ನಮಸ್ಕರಿಸಿ ನಮ್ಮ ತಿನ್ನುವ ಆಹಾರವನ್ನು ತಯಾರಿಸುತ್ತೇವೆ. ಅಷ್ಟೇ ಏಕೆ? ಮದುವೆಯ ಕಾರ್ಯಕ್ರಮದಲ್ಲಿ ಅಗ್ನಿಯ ಸುತ್ತ ಸುತ್ತುತ್ತಾ ಶಪಥ ಕೈಗೊಳ್ಳುತ್ತೇವೆ. ಹೀಗಿರುವಾಗ ದೀಪಾವಳಿ ವಿಶೇಷ ಹಬ್ಬವಾಗಿ ಆಚರಿಸಲ್ಪಡದೆ ಉಳಿಯುವುದೇ. ಹಾಗಾಗಿ ಹಬ್ಬದ ಸಡಗರದಲ್ಲಿರುವ ನಿಮಗೆ ಹಬ್ಬದ ಕುರಿತಾದ ಮಾಹಿತಿ ಇಲ್ಲಿದೆ.
ದೀಪಾವಳಿ ಎಂದಾಕ್ಷಣ ನೆನಪಾಗುವುದು ಉರಿಯುವ ದೀಪ, ಪೂಜೆ, ಪಟಾಕಿ ಸದ್ದು, ಜೊತೆಗೆ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ, ಕಣ್ಣಿಗೆ ಮುದ ನೀಡುವ ಗೂಡುದೀಪಗಳು.
ದೀಪಾವಳಿಯು ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ.ಎಲ್ಲೆಡೆ ಹಬ್ಬದ ಸಿದ್ಧತೆಗಳು ತುಂಬಾನೆ ಭರದಿಂದ ಆರಂಭವಾಗಿವೆ. ದೀಪಗಳ ಹಬ್ಬ ದೀಪಾವಳಿಯನ್ನು ಹೊಸ ಬಟ್ಟೆ ತೊಟ್ಟು, ದೀಪ ಬೆಳಗಿ ನಂತರ ಸಿಹಿಯನ್ನು ಸವಿಯುವುದಷ್ಟೇ ಅಲ್ಲ. ಈಗಿನ ಯುವ ಪೀಳಿಗೆ ಮತ್ತು ಶಾಲಾ ಮಕ್ಕಳು ಕೂಡ ಈ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಗಳ ಬಗ್ಗೆ ತಿಳಿಯಲೇಬೇಕು.
ದೀಪಾವಳಿ ಹಬ್ಬದಲ್ಲಿ ಸದ್ದು ಮಾಡುವ ಪಟಾಕಿಗೂ ಹಿನ್ನೆಲೆ ಇದೆ. ನಮ್ಮ ಧರ್ಮ ಸಂಸ್ಕೃತಿ ಯಾವುದು ಹಿನ್ನೆಲೆಯನ್ನು ಹೊರತಾಗಿ ಇಲ್ಲ. ಆ ಕಥೆ ಏನೆಂದರೆ ದ್ವಾಪರದಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಕೊಂದಾಗ, ಅವನ ರಾಸಾಯನಿಕಮಯವಾದ ದೇಹವನ್ನು ಸುಟ್ಟಾಗ, ಅದರಿಂದ ಬಣ್ಣದ ಕಿಡಿಗಳು ಶಬ್ದ ಮಾಡುತ್ತಾ ಚಿಮ್ಮಿದವು. ಅದನ್ನು ಸಂಕೇತಿಸುವುದಕ್ಕೇ ಪಟಾಕಿಗಳನ್ನು ಸಿಡಿಸುವುದು ಎನ್ನುವುದು. ಇದರೊಂದಿಗೆ ಬೆಳೆದು ಬಂದ ಜಾನಪದದ ಕತೆಯೂ ಇದೆ. ಅತಿಯಾದ ಹೊಗೆ- ಶಬ್ದಗಳನ್ನು ಮಾಡದ, ಅಪಾಯಕಾರಿಗಳಲ್ಲದ ಪಟಾಕಿಗಳನ್ನು ಹದವರಿತು ಹಿತಮಿತವಾಗಿ ಸಿಡಿಸುವುದು ತಪ್ಪಲ್ಲ. ಆದರೆ, ಮೋಜಿಗಾಗಿ ಪಟಾಕಿಗಳನ್ನು ವಿಪರೀತವಾಗಿ ಸುಡುವುದು ತಪ್ಪು ಮತ್ತು ಪರಿಸರಕ್ಕೆ ಕೂಡಾ ಮಾರಕ ಎನ್ನುವುದನ್ನು ಮರೆಯುವಂತಿಲ್ಲ.
ನಂಬಿಕೆ ಮತ್ತು ಸಂಸ್ಕೃತಿಯ ಜೀವಾಳವಾಗಿರುವ ಹಬ್ಬಗಳು ನಮ್ಮ ದೇಶದ ಅಸ್ಮಿತೆ. ಇಲ್ಲಿ ಪ್ರತೀ ಹಬ್ಬವೂ ವಿಶೇಷ. ಅದರಲ್ಲೂ ದೀಪಾವಳಿ ಬೆಳಕಿನ ಹಬ್ಬ ಭವಿಷ್ಯದ ಕೈಗನ್ನಡಿ ಎಂದು ನಂಬಲಾಗುತ್ತದೆ. ಯಾಕೆಂದರೆ ದೀಪ ಪ್ರಗತಿಯ ಸಂಕೇತ. ಹಚ್ಚುವ ಪ್ರತೀ ದೀಪವು ಪರಂಜ್ಯೋತಿ ಯಾಗಿ ಬಾಳು ಬೆಳಗುವ ಭರವಸೆ ಈ ದೀಪಾವಳಿ ಹಬ್ಬ. ಸಂಬಂಧಗಳು ಅನುಬಂಧ ವಾಗುವ ಹಬ್ಬ. ಆಚರಣೆ, ಆರಾಧನೆ, ಆಡಂಬರ, ಆಧುನಿಕತೆಯ ಸ್ಪರ್ಶದಲ್ಲೂ ಮೂಲದ ನಂಟು ಬಿಡದೆ ದೇಶದ ಉದ್ದಗಲಕ್ಕೂ ಸಂಭ್ರಮಿಸುವ ಹಬ್ಬ.
ಪ್ರಕೃತಿ ಮತ್ತು ನಮ್ಮ ನಡುವಿನ ಬೆಸುಗೆಯೂ ದೀಪಾವಳಿ ಹಬ್ಬದ ವಿಶೇಷ. ಇಲ್ಲಿ ತುಳಸಿ, ಗೋವು, ಭೂಮಿ ಎಲ್ಲದರ ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ದುಷ್ಟ ಶಕ್ತಿಗಳ ದಮನದ ಸಂಕೇತವಾಗಿ ಸುಡುಮದ್ದುಗಳನ್ನೂ ಸುಡಲಾಗುತ್ತದೆ. ಆದರೆ ಎಲ್ಲರೂ ಪರಿಸಸ್ನೇಹಿ ಸುಡುಮದ್ದುಗಳ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯತೆಯನ್ನು ಮರೆಯಬಾರದು. ಒಟ್ಟಾರೆಯಾಗಿ ದೀಪಾವಳಿ ಇಲ್ಲಿ ಬರಿಯ ಹಬ್ಬವಲ್ಲ ಇದು ಬದುಕಿನ ಸಂಸ್ಕಾರ, ಸಂಪ್ರದಾಯದ ಜೀವಾಳ ಕೂಡಾ.
ದೀಪದ ಬೆಳಕು ನಮ್ಮ ಮನೆ ಮನ ಬೆಳಗುವ ನಂದಾದೀಪವಾಗಲಿ. ದೀಪಾವಳಿ ಎಲ್ಲರಿಗೂ ಸಂತಸ ಸಂಭ್ರಮ ತರಲಿ. ದೀಪಾವಳಿ ಹಬ್ಬದ ಶುಭಾಶಯಗಳು.