ಪುತ್ತೂರು: ಕೋಮುಗಲಭೆ ಸಹಿತ ವಿವಿಧ ಕಾರಣಗಳಿಂದ ಕರಾವಳಿ ತಪ್ಪಾಗಿ ಪ್ರತಿಬಿಂಬಿತವಾಗುತ್ತಿದೆ. ಹೀಗಾಗಿ ಇಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾಗಿ ರಾಜ್ಯ ಸರಕಾರವು ಪ್ರತ್ಯೇಕ ಟೂರಿಸಂ ನೀತಿ ಜಾರಿಗೆ ಸಿದ್ಧತೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪುತ್ತೂರಿನಲ್ಲಿ ನಡೆದ 12ನೇ ವರ್ಷದ ವಸ್ತ್ರದಾನ, ಸಹಭೋಜನ ಹಾಗೂ ದೀಪಾವಳಿ ಗೂಡುದೀಪ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರಾವಳಿಯ ಆರ್ಥಿಕತೆಗೆ ಶಕ್ತಿ ತುಂಬಿದ್ದ ಬ್ಯಾಂಕ್, ಶಿಕ್ಷಣ ಸಂಸ್ಥೆಗಳು ಈಗ ಮುಚ್ಚುತ್ತಿವೆ. ಬೇರೆ ಊರುಗಳಿಂದ ಇಲ್ಲಿಗೆ ಜನರು ಬರುವುದು ಕಡಿಮೆ ಆಗಿದೆ. ಇಲ್ಲಿನ ಕೆಲವು ಘಟನೆಗಳು ಇದಕ್ಕೆ ಕಾರಣ. ಹಾಗಾಗಿ ಕರಾವಳಿಯ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ಟೂರಿಸಂ ಮೂಲಕ ಇಲ್ಲಿ ಉದ್ಯೋಗ ಸೃಷ್ಟಿಗೆ ಸರಕಾರ ಮುಂದಾಗಿದೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ತನ್ನ ಭಾಷಣದಲ್ಲಿ ಮುಂದಿನ ಬಜೆಟ್‌ನಲ್ಲಿ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಕಾರ ನೀಡಬೇಕು. ವರ್ಷ ವರ್ಷ 150 ಕೋ.ರೂ.ಯಂತೆ ಅನುದಾನ ನೀಡಿದರೆ ಸಾಕು ಎನ್ನುತ್ತಾ ಮೆಡಿಕಲ್ ಕಾಲೇಜು ಬೇಕೇ ಬೇಕು ಎಂದು ಘೋಷಣೆ ಮೊಳಗಿಸಿದರು. ಇದಕ್ಕೆ ಸಭೆಯಲ್ಲಿ ನೆರೆದಿದ್ದ ಸಾವಿರಾರು ಮಂದಿ ಎದ್ದು ನಿಂತು ಧ್ವನಿಗೂಡಿಸಿದರು. ತನ್ನ ಭಾಷಣದಲ್ಲಿ ಇದನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, ಅಶೋಕ್ ರೈ ಮತ್ತು ಇಲ್ಲಿನ ಜನರ ಭಾವನೆ ನನಗೆ ಅರ್ಥ ಆಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಹಿರಂಗವಾಗಿ ಏನನ್ನೂ ಹೇಳಲಾರೆ. ನಿಮ್ಮ ಬೇಡಿಕೆಗೆ ಹಂತ ಹಂತವಾಗಿ ಸರಕಾರ ಸ್ಪಂದಿಸಲಿದೆ ಎಂದರು. ಇದಕ್ಕೆ ಜನರು ಕರಾಡತನದ ಮೂಲಕ ಬೆಂಬಲ ಸೂಚಿಸಿದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಬೇಡಿಕೆ ಪುತ್ತೂರಿನಲ್ಲೂ ಮೊಳಗಿತು. ವೇದಿಕೆಯಲ್ಲಿದ್ದ ಧರ್ಮಗುರು ಎಸ್.ಬಿ.ದಾರಿಮಿ ಅವರು ಡಿ.ಕೆ.ಶಿ. ಮುಂದೆ ಮುಖ್ಯಮಂತ್ರಿಯಾಗಲಿ ಎಂದರು. ಶಾಸಕ ಅಶೋಕ್ ಕುಮಾರ್ ರೈ ಅವರು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ಡಿಕೆಶಿ ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸಿದರು. ಬಳಿಕ ತಪ್ಪನ್ನು ಸರಿಪಡಿಸಿಕೊಂಡು ಉಪಮುಖ್ಯಮಂತ್ರಿ ಎಂದು ಹೇಳಿದರು.