ಹೊಸದಿಲ್ಲಿ: ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ, ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಅವರು ಘೋಷಣೆ ಮಾಡಿದ್ದು, ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡುವ 1 ಸಾವಿರ ರೂ ಹಣವನ್ನು ಹೆಚ್ಚಿಸುವುದಾಗಿ ಅವರು ಗುರುವಾರ ಹೇಳಿದ್ದಾರೆ.
ಅಲ್ಲದೆ, ಫೆಬ್ರವರಿಯಲ್ಲಿ ನಡೆಯುವ ಚುನಾವಣೆಯಲ್ಲಿ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ವ್ಯಕ್ತಪಡಿಸಿದ ಮಾಜಿ ಸಿಎಂ, ಚುನಾವಣೆ ನಡೆದ ಬಳಿಕ ಈ ಮೊತ್ತವನ್ನು 2,100ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ಯೋಜನೆ ಲಭಿಸಲಿದೆ. ಇದರ ನೋಂದಣಿ ನಾಳೆಯಿಂದಲೇ ಆರಂಭವಾಗಲಿದೆ. ಆದರೆ ಈ ತಕ್ಷಣದಿಂದಲೇ ಖಾತೆಗಳಿಗೆ ಹಣ ಜಮೆಯಾಗುವುದಿಲ್ಲ. ಏಕೆಂದರೆ ಮುಂದಿನ 10- 15 ದಿನಗಳಲ್ಲಿ ನಿರ್ಣಾಯಕ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
“ಪ್ರತಿ ಮಹಿಳೆಗೂ ತಲಾ 1 ಸಾವಿರ ರೂ ನೀಡುವುದಾಗಿ ನಾನು ಈ ಹಿಂದೆ ಭರವಸೆ ಕೊಟ್ಟಿದ್ದೆ. ಆದರೆ ಹಣದುಬ್ಬರ ವಿಪರೀತವಾಗಿದೆ. ಹೀಗಾಗಿ 1 ಸಾವಿರ ರೂ ಏನಕ್ಕೂ ಸಾಲುವುದಿಲ್ಲ ಎಂದು ಕೆಲವು ಮಹಿಳೆಯರು ನನ್ನ ಬಳಿ ಬಂದು ಹೇಳಿದ್ದರು. ಹೀಗಾಗಿ ಎಲ್ಲ ಮಹಿಳೆಯರ ಖಾತೆಗಳಿಗೆ 2,100ರೂ ಜಮೆ ಮಾಡಲಾಗುವುದು” ಎಂದು ಎಎಪಿ ನಾಯಕ ಘೋಷಿಸಿದ್ದಾರೆ.