ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದಲ್ಲಿ ಐವರು ಯುವಕರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡ ಶಾಸಕ ಅಶೋಕ್ ರೈ ಅವರು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ ಎಂದು ಬಿಂಬಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸೇರಿಕೊಂಡ ಈ ಐವರಲ್ಲಿ ಯಾರೂ ಕೂಡ ಬಿಜೆಪಿ ಕಾರ್ಯಕರ್ತರಿಲ್ಲ. ಒಬ್ಬರೂ ಕೂಡ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿಲ್ಲ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ, ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷರಾದ ರತನ್ ರೈ ಕುಂಬ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆಗೊಂಡವರೆಂದು ತೋರಿಸಿಕೊಂಡವರಲ್ಲಿ ಚಿರಂಜಿತ್ ಎಂಬವರು ಕಳೆದ ಗ್ರಾಪಂ ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡವರು.
ಇನ್ನೊಬ್ಬರು ರಂಜಿತ್ ಎಂಬವರು ಚಿರಂಜಿತ್ ಅವರ ಸಹೋದರನಾಗಿದ್ದು, ಇವರಿಬ್ಬರೂ ಬೋಳೋಡಿಯ ಹಿರಿಯ ಕಾಂಗ್ರೆಸ್ ಮುಖಂಡರ ಜತೆ ಅನೇಕ ವರ್ಷಗಳಿಂದ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದವರು. ಇವರನ್ನು ಬಿಜೆಪಿಯಿಂದ ಕಾಂಗ್ರೆಸ್‍ಗೆ ಸೇರ್ಪಡೆ ಎಂದು ಯಾವ ಆಧಾರದಲ್ಲಿ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ತೋರಿಸಿಕೊಂಡಿದ್ದಾರೆ? ಸಂದೀಪ್ ಮತ್ತು ಶರತ್ ಎಂಬವರು ಕೂಡ ಬಿಜೆಪಿಯ ಕಾರ್ಯಕರ್ತರಲ್ಲ. ಯಾವ ಚುನಾವಣೆಯಲ್ಲೂ ಅವರು ಬಿಜೆಪಿ ಪರ ಕೆಲಸ ಮಾಡಿಲ್ಲ. ರಾಕೇಶ್ ರೈ ಎಂಬವರು ಮಾತ್ರ ಹಿಂದಿನ ಬಾರಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದರು. ಈ ಬಾರಿ ಸದಸ್ಯತ್ವ ಮರು ನೋಂದಣಿ ನಡೆಯುವಾಗ ಅವರು ಪಕ್ಷದ ಸದಸ್ಯತ್ವ ಪಡೆಕೊಂಡಿಲ್ಲ. ಹೀಗಾಗಿ ಎಲ್ಲ ಐವರಲ್ಲಿ ಒಬ್ಬರು ಕೂಡ ಬಿಜೆಪಿ ಸದಸ್ಯರಿಲ್ಲ. ಹಾಗಿದ್ದೂ ಕಾಂಗ್ರೆಸ್ ಕಾರ್ಯಕರ್ತರನ್ನೇ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ದುರ್ದೆಸೆ ಶಾಸಕರಿಗೆ ಯಾಕೆ ಬಂತು ಗೊತ್ತಿಲ್ಲ ಎಂದವರು ಹೇಳಿದರು.
ಹಾಲಿ ಶಾಸಕರ ಅಭಿವೃದ್ಧಿ ಕಾರ್ಯ ನೋಡಿ ಕಾಂಗ್ರೆಸ್‍ಗೆ ಸೇರಿದ್ದಾರೆ ಎಂದು ಬಿಂಬಿಸಲಾಗಿದೆ. ಹಾಗಾದರೆ ಅಶೋಕ್ ರೈ ಶಾಸಕರಾದ ಮೇಲೆ ಕೆದಂಬಾಡಿ ಗ್ರಾಮಕ್ಕೆ ಎಷ್ಟು ಅನುದಾನ ತಂದಿದ್ದಾರೆ ತೋರಿಸಲಿ. ಸಂಜೀವ ಮಠಂದೂರು ಶಾಸಕರಾಗಿದ್ದಾಗ ಕೆದಂಬಾಡಿ ಗ್ರಾಮಕ್ಕೆ 16 ಕೋಟಿ ಅನುದಾನ ತಂದಿದ್ದರೆ ಪೈಸೆ ಪೈಸೆ ಲೆಕ್ಕವನ್ನೂ ನಾವು ಕೊಡಲು ಸಿದ್ಧರಿದ್ದೇವೆ.
ಶಾಸಕರು ವೃಥಾ ಭಾಷಣ ಮಾಡುವುದು ಬಿಟ್ಟು ಅಭಿವೃದ್ಧಿ ಕಾರ್ಯ ಮಾಡಲಿ. ನಾವು ಅವರಿಂದ ಅದನ್ನೇ ನಿರೀಕ್ಷಿಸುತ್ತಿದ್ದೇವೆಯೇ ಹೊರತು ಸುಳ್ಳು ಮಾತುಗಳನ್ನಲ್ಲ ಎಂದರು.
ಪುತ್ತೂರಿಗೆ ಒಂದು ಗೋಣಿ ಸಿಮೆಂಟ್ ಕೂಡ ಬಂದಿಲ್ಲ ಎಂದು ಹೇಳಿದ್ದಾರೆನ್ನಲಾದ ಮಾಜಿ ಶಾಸಕರಿಗೆ ಉತ್ತರಿಸುತ್ತಾ ಶಾಸಕ ಅಶೋಕ್ ರೈ ಅವರು ಪುತ್ತೂರಿಗೆ ಒಂದು ಕೋಟಿ ಸಿಮೆಂಟ್ ಗೋಣಿ ಬರಲಿದೆ ಎಂದಿದ್ದಾರೆ. ಕೇವಲ ಗೋಣಿ ಬರುವುದು ಬೇಡ, ಬಂದರೆ ಸಿಮೆಂಟ್ ಅಷ್ಟು ಗೋಣಿಯಲ್ಲಿ ಬಂದು ಅಭಿವೃದ್ಧಿ ಆಗಲಿ. ಶಾಸಕರ 1 ಕೋಟಿ ಗೋಣಿಯಲ್ಲಿ ಕೆದಂಬಾಡಿ ಗ್ರಾಮದ ದರ್ಬೆ -ಆಲಡ್ಕ ರಸ್ತೆ ಅಭಿವೃದ್ಧಿ ಆಗಲಿ. ಹಾರೆ ಪಿಕ್ಕಾಸಿನ ಗುದ್ದಲಿ ಪೂಜೆ ಮಾತ್ರ ಮಾಡಿದರೆ ಸಾಲದು ಎಂದು ಹೇಳಿದ ರತನ್ ರೈ, ಶಾಸಕರು ಇಡೀ ಪುತ್ತೂರಿಗೆ ಸೇರಿದವರು. ಅವರಿಂದ ನಾವು ಅಭಿವೃದ್ಧಿ ನಿರೀಕ್ಷಿಸುತ್ತೇವೆ, ಸುಳ್ಳು ಭಾಷಣವನ್ನಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಸದಸ್ಯರಾದ ಕೃಷ್ಣಕುಮಾರ್ ಇದ್ಯಪೆ, ಶಕ್ತಿಕೇಂದ್ರದ ಪ್ರಮುಖ್ ಶರತ್ ಗುತ್ತು, ಪಕ್ಷದ ಪ್ರಮುಖರಾದ ಪದ್ಮನಾಭ ಗೌಡ ಮುಂಡಾಲ ಉಪಸ್ಥಿತರಿದ್ದರು.