ಪುತ್ತೂರು: ಅಭಿರಾಮ ಫ್ರೆಂಡ್ಸ್ ಕ್ಲಬ್ ಪುತ್ತೂರು ಅರ್ಪಿಸುವ ‘ಪುತ್ತೂರು ಪ್ರೀಮಿಯರ್ ಲೀಗ್-2025’ ಪಿಪಿಎಲ್ ಸೀಸನ್-6 ಹಾಗೂ 8 ಇಲಾಖೆಗಳ ಪ್ರದರ್ಶನ ಪಂದ್ಯಾಟ ‘ಒಫೀಶಿಯಲ್ ಚಾಂಪಿಯನ್ ಟ್ರೋಫಿ’ ಫೆ.1 ಹಾಗೂ 2 ರಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಭಿರಾಮ್ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ನವೀನ್ ರೈ ಪಂಜಳ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಭಿರಾಮ್ ಫ್ರೆಂಡ್ಸ್ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬಂದಿದ್ದು, ಮುಖ್ಯವಾಗಿ ಸುಮಾರು 40 ವಿದ್ಯಾರ್ಥಿಗಳಿಗೆ 1.50 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಿದೆ. ಅಲ್ಲದೆ ಪ್ರತೀ ವರ್ಷ ರಕ್ತದಾನ ಶಿಬಿರ, ಸ್ವಾತಂತ್ರ್ಯೋತ್ಸವದಂದು ಸರಕಾರಿ ಶಾಲೆಗಳಿಗೆ ಬೆಂಚ್, ಡೆಸ್ಕ್ ಇನ್ನಿತರ ಸೌಕರ್ಯಗಳನ್ನು ಒದಗಿಸುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವಾ ಕಾರ್ಯ ಮಾಡುವುದು ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಅಭಿರಾಮ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಜಿತ್ ಮಂಜಲ್ಪಡ್ಪು ಮಾತನಾಡಿ, ರಾತ್ರಿ, ಹಗಲು ನಡೆಯುವ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ಒಂದು ಲಕ್ಷ ರೂ. ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 50 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ ಜಯಗಳಿಸಿದ ಟೀಮ್ ಮಾಲೀಕನಿಗೆ ಬೈಕ್ ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.
ಫೆ.1 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟ ಸಮಾರಂಭವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಲೀಲಾವತಿ ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಪುತ್ತೂರು ಮಾಯಿದೇ ದೇವುಸ್ ಚರ್ಚ್ ಧರ್ಮಗುರು ರೆ.ಫಾ.ಲಾರೆನ್ಸ್ ಮಸ್ಕರೇನಸ್, ಸಂತ ಫಿಲೋಮಿನಾ ಕಾಲೇಜು ಪ್ರಿನ್ಸಿಪಾಲ್ ರೆ.ಫಾ.ಆ್ಯಂಟನಿ ಪ್ರಕಾಶ್ ಮೊಂತೆರೋ, ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಿಲ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಹಿರಿಯ ಮೋಟಾರು ವಾಹನ ನಿರೀಕ್ಷಕ ಅಶ್ಪಾನ್ ಮಂಗಳೂರು, ನಗರಸಭೆ ಇಂಜಿನಿಯರ್ ಅರುಣ್ ಕುಮಾರ್, ಪ್ರಾದೇಶಿಕ ಸಾರಿಗೆ ಇಲಾಖೆಯ ದೀಪಕ್ ಕುಮಾರ್ ಮಂಗಳೂರು, ಪುತ್ತೂರು ಯುವ ಸಬಲೀಕರಣ ದ ಕ್ರೀಡಾಧಿಕಾರಿ ಶ್ರೀಕಾಂತ್ ಬಿರ್ವ, ಪುತ್ತೂರು ಶಬರಿ ಅಯ್ಯಪ್ಪ ಭಕ್ತ ವೃಂದದ ದೇವಾನಂದ ಗುರುಸ್ವಾಮಿ, ಪುತ್ತೂರು ಪಿಪಿಎಲ್ ಆಯೋಜಕ ಭಾನುಪ್ರಕಾಶ್ ಆಚಾರ್ಯ, ಅಭಿರಾಮ್ ಫ್ರೆಂಡ್ಸ್ ಗೌರವಾಧ್ಯಕ್ಷ ನವೀನ್ ರೈ ಪಂಜಳ, ಅಧ್ಯಕ್ಷ ಪ್ರಜಿತ್ ಮಂಜಲ್ಪಡ್ಪು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಶನಿವಾರ ಸಂಜೆ 7 ಕ್ಕೆ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಭಾನುವಾರ ಸಂಜೆ 7 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಮುಖ್ಯ ಅತಿಥಿಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿರಾಮ್ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಪ್ರಮುಖ್, ಉಪಾಧ್ಯಕ್ಷ ಸನತ್ ಉಪಸ್ಥಿತರಿದ್ದರು