ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳದಲ್ಲಿ ಲಕ್ಷಾಂತರ ಸಾಧು-ಸಂತರು ನಾಗಸಾಧುಗಳು, ದೇಶದ ಮೂಲೆ ಮೂಲೆಯ ಭಕ್ತರು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ ಈವರೆಗೂ 25 ಕೋಟಗೂ ಅಧಿಕ ಭಕ್ತರು ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಕಿರಣ್ ರಿಜಿಜು, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಗಣ್ಯರು ಈಗಾಗಲೇ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿದ್ದು, ಇದೀಗ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಗ್ ರಾಜ್‌ಗೆ ಆಗಮಿಸುವ ದಿನಾಂಕ ನಿಗದಿಯಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಅಂದರೆ ಫೆಬ್ರವರಿ 05 ಬುಧವಾರದಂದು ಪ್ರಯಾಗ್ ರಾಜ್‌ಗೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದಲ್ಲಿ ಕೈಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 11 ರಿಂದ 11:30 ರವರೆಗೆ ಪವಿತ್ರ ಸ್ನಾನ ಮಾಡಲಿದ್ದಾರೆ. ಬೆಳಗ್ಗೆ 10:05ಕ್ಕೆ ಪ್ರಯಾಗ್ ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿಗಳು ವಿಮಾನ ನಿಲ್ದಾಣದಿಂದ ಡಿಪಿಎಸ್ ಹೆಲಿಪ್ಯಾಡ್‌ಗೆ ಪ್ರಯಾಣಿಸಲಿದ್ದಾರೆ.
10:45ಕ್ಕೆ ಅರೈಲ್ ಘಾಟ್ ತಲುಪಲಿರುವ ಪ್ರಧಾನಿ ಮೋದಿ ಅರೈಲ್ ಘಾಟ್‌ನಿಂದ ಬೋಟ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವ ಸ್ಥಳಕ್ಕೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ 11 ರಿಂದ 11:30 ರವರೆಗೆ ಪ್ರಧಾನಿಗಳ ಕುಂಭ ಸ್ನಾನಕ್ಕೆ ಸಮಯ ನಿಗದಿಯಾಗಿದ್ದು, ಬಳಿಕ ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ವಾಸಪ್ ಆಗಲಿದ್ದಾರೆ. ಪ್ರಧಾನಿಗಳ ಆಗಮನದ ಹಿನ್ನೆಯಲ್ಲಿ ಪ್ರಯಾಗ್ ರಾಜ್‌ನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಮಹಾ ಕುಂಭ ಮೇಳದ ಮೌನಿ ಅಮಾವಾಸ್ಯೆಯ ಕಾಲ್ತುಳಿತದಲ್ಲಿ 30 ಭಕ್ತರು ಬಲಿಯಾದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಭಕ್ತರ ರಕ್ಷಣೆಗೆ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಿದ್ದು, ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಿದೆ. ಅಲ್ಲದೇ 2019ರ ಅರ್ಧ ಕುಂಭ ಮೇಳದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ತಂಡವನ್ನು ಸದ್ಯ ಪ್ರಯಾಗ್ ರಾಜ್‌ನ ನಿರ್ವಹಣೆಗೆ ನೇಮಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.