ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯಲಿರುವುದರಿಂದ ಶಾಸಕರ ಸೂಚನೆಯಂತೆ ಗ್ರಾಮವಾರು ಸಮಿತಿ ರಚನೆಗೆ ಜೂ.22ರಂದು ಪಡ್ನೂರು ಗ್ರಾಮದ ಕುಂಜಾರು ಶ್ರೀ ಮದಗ ಜನಾರ್ದನ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭಕ್ತವೃಂದ ಪಡ್ನೂರು ಸಮಿತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.
ಮಹಾಲಿಂಗೇಶ್ವರ ದೆವಸ್ಥಾನ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ಆಗುವ ಮುಂಚೆ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕು. ಈ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಅದರಂತೆ ಮುಂದಿನ ದಿನ ಅಭಿವೃದ್ಧಿಯೂ ನಡೆಯುತ್ತದೆ. ದೇವಸ್ಥಾನದ ಕೆರೆಯ ಬಳಿಯ ಮುಖ್ಯರಸ್ತೆಯಿಂದ ನೋಡಿದರೆ ದೇವಸ್ಥಾನ ಸುಂದರವಾಗಿ ಕಾಣಬೇಕು. ನಮ್ಮ ಕಲ್ಪನೆಯಂತೆ ಕೆರೆಯ ಮುಂದೆ ಓಂ ನಮಃ ಶಿವಾಯ ಎಂದು ಹೇಳುವಾಗ 70 ಪೀಟ್ ಎತ್ತರಕ್ಕೆ ಕಾರಂಜಿ ಚಿಮ್ಮಬೇಕು. ಕೆರೆಯ ಭಾಗದಿಂದ ದೇವಳದ ತನಕ ಗ್ರಾನೈಟ್ ಹಾಕಿ ಸುಂದರಗೊಳಿಸಬೇಕು. ಈ ಹಿಂದೆ ಹಲವು ಕಟ್ಟಡಗಳು ನಿರ್ಮಾಣ ಮಾಡಿ ಆಗಿದೆ. ಆದರೆ ಅದಕ್ಕೆ ಯಾವುದಕ್ಕೂ ಮಾಸ್ಟರ್ ಪ್ಲಾನ್ ಇಲ್ಲ. ಹಿಂದಿನ ಕಮಿಟಿ ಕೆಲಸ ಮಾಡಿಲ್ಲ ಅಂತ ಹೇಳುವುದಲ್ಲ. ಅವರನ್ನು ದೂರುವುದು ಅಲ್ಲ. ಅವರಿಗೆ ಶಕ್ತಿ ಕಡಿಮೆ ಇತ್ತು. ಮುಳಿಯದವರು ಪಾಪ ತುಂಬಾ ಪ್ರಯತ್ನ ಮಾಡಿದ್ದರು. ಇವತ್ತು ಎಲ್ಲವೂ ಮಾಸ್ಟರ್ ಪ್ಲಾನ್ ಮೂಲಕವೇ ಆಗಲಿದೆ. ಮುಂದೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬಂದ ಭಕ್ತರು ಪುತ್ತೂರಿಗೂ ಬರುವಂತೆ ಟೆಂಪಲ್ ಟೂರಿಸಮ್‌ಗೆ ಅದ್ಯತೆ ನೀಡಲಿದ್ದೇವೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ನಮ್ಮ ಗ್ರಾಮದಿಂದ ಪೂರ್ಣ ಸಹಕಾರ: ಪಡ್ನೂರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಾರ್ದನ ದೇವಸ್ಥಾನದ ಬ್ರಹ್ಮಕಲಶವೂ ಈ ಸಲ ಆಗಲಿದೆ. ನಮ್ಮದು ಹಲವು ಕೋಟಿಗಳ ಯೋಜನೆಯಿಲ್ಲ. ಆದರೆ 2 ಕೋಟಿ ರೂಪಾಯಿಯ ಯೋಜನೆ ಇದೆ. ನಮಗೆ ಅಗತ್ಯವಾಗಿ ಅರ್ಚಕರ ಮನೆ, ಭಕ್ತರಿಗೆ ಶೌಚಾಲಯ, ಅಡುಗೆ ಶಾಲೆ ಆಗಬೇಕಾಗಿದೆ. ಹೊರಗೆ ಪಾರ್ಕಿಂಗ್ ವ್ಯವಸ್ಥೆಯೂ ಆಗಬೇಕಾಗಿದೆ. ಪಂಜಿಗುಡ್ಡೆ ಈಶ್ವರ ಭಟ್‌ರವರಿಗೆ ಒಳ್ಳೆಯ ರೀತಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಅವರು ಈ ದೇವಸ್ಥಾನಕ್ಕೂ ಸಹಕಾರ ನೀಡಬೇಕು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೂ ನಮ್ಮ ಗ್ರಾಮದಿಂದ ಪೂರ್ಣ ಸಹಕಾರ ನೀಡಲಿದ್ದೇವೆ ಎಂದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕರ ಸೂಚನೆಯಂತೆ ದೇವಳದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಪ್ರತಿ ಗ್ರಾಮದಲ್ಲಿ ಸಮಿತಿ ರಚನೆ ಮಾಡಲು ವ್ಯವಸ್ಥಾಪನಾ ಸಮಿತಿಯಲ್ಲಿ ನಿರ್ಣಯ ಮಾಡಲಾಗಿದೆ. ಅದರಂತೆ ಪಡ್ನೂರು ಗ್ರಾಮದಲ್ಲಿ ಪ್ರಥಮ ಸಮಿತಿಯು ಜನಾರ್ದನ ದೇವರ ಅನುಗ್ರಹದಲ್ಲಿ ಆಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಅನುಭವ ಹೊಂದಿರುವ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರೂ.60 ಕೋಟಿಗಿಂತಲೂ ಹೆಚ್ಚು ವೆಚ್ಚದಲ್ಲಿ ದೇವಳದ ಅಭಿವೃದ್ಧಿ ಕಾರ್ಯ ನಡೆಯಲಿದೆ. ನಮ್ಮ ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಯಿತು. ಈ ಅವಽಯಲ್ಲಿ ದೇವಸ್ಥಾನದಲ್ಲಿ ಹಲವಾರು ಬದಲಾವಣೆ ತರಲಾಗಿದೆ. ಭಕ್ತರು ಸಲಹೆ ಇದ್ದರೆ ತಿಳಿಸಬೇಕು. ಸಮಿತಿಯಲ್ಲಿ ರಾಜಕೀಯ ಮಾಡದೆ ದೇವರ ಕೆಲಸದಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳಬೇಕು. ಯಾವುದೇ ರಾಜಕೀಯ ಬೇಡ. ಗ್ರಾಮ, ದೇವಸ್ಥಾನವನ್ನು ಅಭಿವೃದ್ಧಿ ಮಾಡೋಣ. ಇವತ್ತು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯಾರೇ ಬರಲಿ ಅವರನ್ನು ಭಕ್ತರಂತೆ ಕಾಣುತ್ತೇವೆ. ದೇವಳದ ಅಭಿವೃದ್ಧಿ ಕಾರ್ಯದಲ್ಲೂ ಎಲ್ಲರ ಸಹಕಾರ ಬೇಕೆಂದು ನಾನು ಕೈ ಮುಗಿದು ಕೇಳುತ್ತೇನೆ ಎಂದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ರಾವ್ ಕುಂಜಾರು, ರೋಹಣ್ ಪೂಜಾರಿ ಮಾವಿನಕಟ್ಟೆ, ಮನೋಹರ ಆರುವಾರಗುತ್ತು, ರಾಧಾಕೃಷ್ಣ ಕುಂಜಾರು, ಬಾಳಪ್ಪ ನಾಯ್ಕ ಕುಂಜಾರು, ಸ್ವಪ್ನ ಚೈತ್ರನಾರಾಯಣ ಸೇಡಿಯಾಪು, ಶೋಭಾ ಶ್ರೀಧರ ಗೌಡ ಪೊಯ್ಯೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವರುಣ್ ಸ್ವಾಗತಿಸಿದರು. ಮುರಳಿಕೃಷ್ಣ ಕಡವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮಹಾಲಿಂಗೇಶ್ವರ ದೇವಸ್ಥಾನ ಭಕ್ತವೃಂದ ಪಡ್ನೂರು ಸಮಿತಿಯನ್ನು ಶಾಸಕರು ಉದ್ಘಾಟಿಸಿದ ಬಳಿಕ ಸಮಿತಿಯ ಗೌರವಾಧ್ಯಕ್ಷರನ್ನು, ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಶಾಸಕರು ಶಲ್ಯ ಹೊದಿಸಿ, ಪ್ರಸಾದ ನೀಡಿ ಗೌರವಿಸಿದರು. ಸಮಿತಿ ಗೌರವಾಧ್ಯಕ್ಷರಾಗಿ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಸಂಕಪ್ಪ ಗೌಡ, ಅಧ್ಯಕ್ಷರಾಗಿ ಮೋಹನ್ ಗೌಡ ವಾಲ್ತಾಜೆ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಮಾಲ್ತೊಟ್ಟು,
ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ 12 ಎಕ್ರೆ ಜಾಗವನ್ನೂ ಯಾರೋ ಸ್ವಾದಿನ ಮಾಡಿದ್ದಾರೆ. ಅದನ್ನು ತಕ್ಷಣ ತೆರವು ಮಾಡಿಕೊಡುವಂತೆ ಕನಸು ಬಿದ್ದಿರುವುದುನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಸಭೆಯಲ್ಲಿ ಉಲ್ಲೇಖಿಸಿದರು. ಈ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಆ ಜಾಗದಲ್ಲಿ ಬೇರೆ ಬೇರೆಯವರು ವಾಸ್ತವ್ಯ ಇದ್ದಾರೆಂದು ಗೊತ್ತಾಯಿತು. ಯಾರೆಲ್ಲ ಆ ಜಾಗವನ್ನು ಬಾಡಿಗೆ ಕೊಟ್ಟು ಬೇರೆ ಬೇರೆ ಕಡೆಯಲ್ಲಿದ್ದಾರೋ ಅವರೆಲ್ಲ ಜಾಗವನ್ನು ಬಿಟ್ಟು ಕೊಡಬೇಕು. ಅವರಿಗೆ ತೆರವು ಮಾಡಲು ಸ್ವಲ್ಪ ಸಮಯಾವಕಾಶ ನೀಡಲಾಗಿದೆ. ಈ ನಡುವೆ ನನ್ನ ಪತ್ನಿಗೂ ದೇವಳದ ಜಾಗದ ವಿಚಾರದಲ್ಲಿ ದೋಷ ಭಯ ಉಂಟಾಯಿತು. ಹಾಗಾಗಿ ಪ್ರಶ್ನೆ ಕೇಳಿಯೂ ಆಯಿತು. ಆಗ ದೇವರ ಪೂರ್ಣ ಅನುಗ್ರಹ ಇದೆ ಎಂದು ಪ್ರಶ್ನೆಯಲ್ಲಿ ಕಂಡು ಬಂತು. ಹಾಗಾಗಿ ದೇವರು ಹೇಳಿದಂತೆ ನಾನು ಕೆಲಸ ಮಾಡುತ್ತಿದ್ದೇನೆ.