ಕೇರಳಕ್ಕೆ ವಿದ್ಯುತ್ ತಂತಿ ಸಾಗಾಟ ಯೋಜನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿಕರ ವಿರೋಧ ಕೇಳಿ ಬರುತ್ತಿದೆ. ಈ ನಡುವೆ ಈ ಯೋಜನೆಯನ್ನು ಕೈ ಬಿಡಬೇಕೆಂದು ಇದೀಗ ಹಿಂದೂ ಸಂಘಟನೆಗೂ ಹೋರಾಟಕ್ಕೆ ಸಾಥ್ ಕೊಟ್ಟಿವೆ. ಯೋಜನೆಯಿಂದ ಹಲವು ಹಿಂದೂ ಧಾರ್ಮಿಕ ಕೇಂದ್ರಗಳು ನಾಶವಾಗುವ ಆತಂಕ ಎದುರಾಗಿದೆ.
ಕೇರಳಕ್ಕೆ ಹಾದು ಹೋಗಲಿರುವ ವಿದ್ಯುತ್ ಮಾರ್ಗಕ್ಕೆ ಉಡುಪಿ ಕೃಷಿಕರ ವಿರೋಧದ ಜೊತೆಗೆ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರೂ ವಿರೋಧ ಮಾಡಿದ್ದರು. 400 ಕೆ.ವಿ ವಿದ್ಯುತ್ ಮಾರ್ಗ ಹಾದು ಹೋಗಲು ಸುಮಾರು 115 ಕಿಲೋಮೀಟರ್ ಉದ್ದ ಮತ್ತು 40 ಕಿಲೋಮೀಟರ್ ಅಗಲದ ಜಮೀನು ಅಗತ್ಯ ಇದೆ. ಅಷ್ಟೂ ಜಾಗದ ಕೃಷಿಭೂಮಿ, ದೇವಸ್ಥಾನ, ಮಸೀದಿ, ಶಾಲೆಗಳನ್ನು ಒತ್ತುವರಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ದಟ್ಟ ಅರಣ್ಯದಲ್ಲೂ ಈ ಮಾರ್ಗ ಹಾದುಹೋಗಲಿದೆ. ಇದೀಗ ಹೋರಾಟಕ್ಕೆ ಹಿಂದೂ ಸಂಘಟನೆಗಳು ಬೆಂಬಲಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿದ್ಯುತ್ ಮಾರ್ಗದ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಅನೇಕ ಧಾರ್ಮಿಕ ನಂಬಿಕೆಗಳಿಗೆ ಸಂಬಂಧ ಪಟ್ಟಂತೆ ಮನವಿ ನೀಡಿದ್ದಾರೆ. ಈ ಯೋಜನೆಯ ಅಡಿ ವಿದ್ಯುತ್ ಲೈನ್ ಗಳ ಹಲವು ದೇವಸ್ಥಾನ, ಮಸೀದಿ, ಮನೆಗಳು ಸೇರಿದಂತೆ ಚರ್ಚ್ ಗಳ ಮೇಲೆ ಹಾದು ಹೋಗುತ್ತದೆ ಎಂದು ತಿಳಿಸಿದ್ದಾರೆ.
ಈ ವಿದ್ಯುತ್ ಯೋಜನೆಯಿಂದ ಇಪ್ಪತ್ತಕ್ಕೂ ಹೆಚ್ಚು ದೈವಸ್ಥಾನಗಳು ನಾಶವಾಗಲಿದ್ದು, ಇದು ಧಾರ್ಮಿಕ ಭಾವನೆಗ ಧಕ್ಕೆ ತರಲಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೃಷಿಕರ ಭೂಮಿಯಲ್ಲಿ ಮಾಡಬಾರದು. ವಿದ್ಯುತ್ ಮಾರ್ಗವನ್ನು ಕಡಲ ತೀರದಲ್ಲಿ ಅಂಡರ್ ಗ್ರೌಂಡ್ ಮೂಲಕ ಕೇರಳಕ್ಕೆ ಸಾಗಿಸಲಿ ಅನ್ನೋ ಆಗ್ರಹ ಮಾಡಿದ್ದಾರೆ.
ಕೃಷಿಕರು ರೈತಸಂಘಗಳ ನೇತೃತ್ವದಲ್ಲಿ ನಡೆಸುತ್ತಿದ್ದ ವಿದ್ಯುತ್ ಮಾರ್ಗ ವಿರೋಧಿ ಹೋರಾಟಕ್ಕೆ ಹಿಂದೂ ಸಂಘಟನೆಗಳು ಕೈ ಜೋಡಿಸಿರೋದು ರೈತ ಸಂಘಟನೆಗಳಿಗೆ ಬಲ ಬಂದಂತಾಗಿದೆ.ಧಾರ್ಮಿಕ ಕೇಂದ್ರಗಳ ಮೇಲೆ ವಿದ್ಯುತ್ ಯೋಜನೆಯಿಂದ ಆಗುವ ತೊಂದರೆ ಮತ್ತು ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸುವ ಪ್ರತಿಭಟನೆ ಮತ್ತು ಪಾದಯಾತ್ರೆ.ಯೋಜನೆಯನ್ನು ಕೈಬಿಟ್ಟು ಜನರ ಭಾವನೆಗಳನ್ನು ಇಲಾಖೆಯ ಅಧಿಕಾರಿಗಳು ಅರ್ಥಮಾಡಿಕೊಳ್ಳುವುದು ಸೂಕ್ತವೆಂದು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಮುಂದಿನ ವಾರ ಸಭೆ ಮಾಡಲು ನಿರ್ಧಾರ ಮಾಡಿದ್ದು, ಆ ಬಳಿಕ ನಿರ್ಧಾರ ಹೊರಬೀಳಲಿದೆ. ಬಿಜೆಪಿ ಶಾಸಕರು ಈ ಬಗ್ಗೆ ತಟಸ್ಥ ನಿಲುವು ಪ್ರದರ್ಶನ ಮಾಡ್ತಿದ್ದು, ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.