ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇಡಿಯಾಪು ನಲ್ಲಿ ನಡೆದ ಹೆಜ್ಜೇನು ದಾಳಿಯ ದುರಂತಕ್ಕೆ ಸಂಬಂಧಿಸಿದಂತೆ, ಮೃತಪಟ್ಟ ಬಾಲಕಿ ಇಶಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಬನ್ನೂರು ಗ್ರಾಮ ಪಂಚಾಯತ್ ತೀವ್ರವಾಗಿ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ಪಂಚಾಯತ್ ತುರ್ತು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.ಅಕ್ಟೋಬರ್ 10 ರಂದು ಸೇಡಿಯಾಪು ಸಮೀಪದ ಕೂಟೇಲು ಬಳಿ ಹೆಜ್ಜೇನು ದಾಳಿಗೆ ಎರಡನೇ ತರಗತಿಯ ಬಾಲಕಿ ಇಶಾ ದಾರುಣವಾಗಿ ಬಲಿಯಾಗಿದ್ದು, ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಯಲ್ಲಿ ಬಾಲಕ ಪ್ರತ್ಯೂಷ್ ಹಾಗೂ ರಕ್ಷಣೆಗೆ ಧಾವಿಸಿದ ನಾರಾಯಣ ಅವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕು ಆಡಳಿತದ ಮೇಲೆ ಆಕ್ರೋಶ
ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಿತಾ ಅವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ, ಘಟನೆಯ ಸಂದರ್ಭದಲ್ಲಿ ತಾಲ್ಲೂಕು ಆಡಳಿತದಿಂದ ಯಾವುದೇ ಸಕಾಲಿಕ ಸ್ಪಂದನೆ ದೊರಕಿಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಬಾಲಕಿಯ ಮೃತದೇಹವನ್ನು ತಂದ ಆಂಬುಲೆನ್ಸ್ಗೆ ಪೆರ್ನೆಯಲ್ಲಿ ಕೆಲವು ಕಿಡಿಗೇಡಿಗಳು ಅಡ್ಡಿಪಡಿಸಿ ದಾಂಧಲೆ ನಡೆಸಿರುವುದು ಬೆಳಕಿಗೆ ಬಂದಿದ್ದು, ಈ ಕೃತ್ಯದ ವಿರುದ್ಧ ಕಾನೂನು ಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ