ಪುತ್ತೂರು, ಅ.17: ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ (2283) ಶೈಲ ಎಂ.ಕೆ. ಅವರನ್ನು ಕರ್ತವ್ಯದಿಂದ ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗಿದೆ.
ಮಾಹಿತಿಯ ಪ್ರಕಾರ, ಅಕ್ಟೋಬರ್ 17 ರಂದು ಸಂಜೆ ಕುರಿಯ ಗ್ರಾಮದ ಆಟೋ ಚಾಲಕ ಬಶೀರ್ ಸಮವಸ್ತ್ರ ಧರಿಸಿ ಆಟೋ ಚಲಾಯಿಸುತ್ತಿದ್ದ ವೇಳೆ, ಕರ್ತವ್ಯದಲ್ಲಿದ್ದ ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ ಶೈಲ ಎಂ.ಕೆ. ಅವರು ಕೈ ಸನ್ನೆ ಮೂಲಕ ವಾಹನ ನಿಲ್ಲಿಸಲು ಸೂಚಿಸಿದರೂ, ಚಾಲಕ ಆಟೋ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.
ಪೊಲೀಸರು ನಂತರ ವಾಹನವನ್ನು ಹಿಂಬಾಲಿಸಿ ತಡೆದ ಸಂದರ್ಭದಲ್ಲಿ, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕೈಯಿಂದ ಹಲ್ಲೆ ನಡೆದಿರುವುದಾಗಿ ಆರೋಪಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ವಿಷಯವನ್ನು ಪರಿಶೀಲಿಸಿದ ಮೇಲಧಿಕಾರಿಗಳು ಇಬ್ಬರು ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.