ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನ.30ರಂದು ಭಕ್ತಿ, ಸಡಗರದೊಂದಿಗೆ ಭಕ್ತ ಜನ ಸಾಗರ ಸೇರಿ ಅದ್ದೂರಿಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾಗಿರುವ ಭವ್ಯವಾದ ತ್ರಿನೇತ್ರ ವೇದಿಕೆಯಲ್ಲಿ ವೈಭವಯುತವಾಗಿ ನಡೆಯಿತು.
ಲೋಕ ಕಲ್ಯಾಣಾರ್ಥವಾಗಿ ಶೂರರಾಜ ಪೌತ್ರನಾದ ವಸುದೇವನ ಪುತ್ರನಾದ ಶ್ರೀ ವಶಿಷ್ಠ ಗೋತ್ರೋತ್ಪನ್ನನಾದ ಸಾಕ್ಷತ್ ಮನ್ಮಥನಾದ ರಮಾವಲ್ಲಭನಾದ, ಭೂವೈಕುಂಠಾಧಿಪತಿ ಶ್ರೀ ಶ್ರೀನಿವಾಸ ಹಾಗೂ ಸುಧರ್ಮರಾಜನ ಪೌತ್ರಿಯಾದ ಆಕಾಶರಾಜನ ಪುತ್ರಿಯಾದ ಶ್ರೀ ಅತ್ರಿಗೋತ್ರೋತ್ಪನ್ನಳಾದ ಶ್ರೀ ಪದ್ಮಾವತಿಯ ಕಲ್ಯಾಣೋತ್ಸವ ಗೋಧೋಳಿ ಲಗ್ನದಲ್ಲಿ ವಿಜ್ರಂಭಣೆಯಿಂದ ಭಕ್ತಿ ಪ್ರಧಾನವಾಗಿ ಸಂಪನ್ನಗೊಂಡಿತು.
ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು.ಶುಭಘಳಿಗೆಯಲ್ಲಿ ಸಹಸ್ರಾರು ಭಕ್ತರಿಂದ‘ಗೋವಿಂದ..ಗೋವಿಂದಾ..’ಉದ್ಘೋಷದೊಂದಿಗೆ ಮಾಂಗಲ್ಯ ಧಾರಣೆ ನಡೆಯಿತು.ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ತಿರುಪತಿ ಶ್ರೀಕ್ಷೇತ್ರ ಮೂಲದ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ವೇ.ಮೂ ಮೋಹನ್ ಮತ್ತು ವೇ.ಮೂ ರಾಮಚಂದ್ರ ಭಟ್ಟಾಚಾರ್ಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.ಸುಮಾರು 12 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು.ವೈದಿಕ ಸಮಿತಿಯ ಸಂಚಾಲಕ ಗುರು ತಂತ್ರಿ, ಶ್ರೀಕೃಷ್ಣ ಉಪಾಧ್ಯಾಯ, ಸಹಸಂಚಾಲಕರಾದ ಅಶೋಕ್ ಪುತ್ತಿಲ, ಪ್ರದೀಪ್, ಕಲ್ಯಾಣೋತ್ಸವದ ವಿವಿಧ ಜವಾಬ್ದಾರಿ ನಿರ್ವಹಿಸಿದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಯಾಕ್ಸೋ-ನ್ ವಾದಕ ಪಿ.ಕೆ.ಗಣೇಶ್ ಮತ್ತು ಅವರ ಪುತ್ರ ಶಿವರಾಜ್ ಕಲ್ಯಾಣೋತ್ಸವದಲ್ಲಿ ಮಂಗಳ ವಾದ್ಯ ನುಡಿಸಿದರು.
ಬೆಳಿಗ್ಗೆ 6.30ಕ್ಕೆ ಸುಪ್ರಭಾತ ಪೂಜೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು.ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತು. ಸಂಜೆ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಕುರಿತು ತಿರುಪತಿಯ ಅರ್ಚಕರು ಪ್ರವಚನ ನೀಡಿದರು.ಅದಾದ ಬಳಿಕ ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು.
ಮಾಂಗಲ್ಯ ಧಾರಣೆಯ ಶುಭಘಳಿಗೆಯಲ್ಲಿ ಸಹಸ್ರಾರು ಭಕ್ತರಿಂದ ಗೋವಿಂದಾ ಗೋವಿಂದಾ ಉದ್ಘೋಷ ಮೊಳಗಿತು.ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.ಕಾರ್ಯಕ್ರಮದಲ್ಲಿ ಸಹಸ್ರಸಹಸ್ರ ಸಂಖ್ಯೆಯ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಿತು. ಕಲ್ಯಾಣೋತ್ಸವಕ್ಕೆ ಸಿದ್ಧಪಡಿಸಿದ ಸುಮಾರು 60 ಸಾವಿರ ಚದರ ಅಡಿಯ ಪೆಂಡಾಲ್‌ನಲ್ಲಿ ಭಕ್ತರು ತುಂಬಿ ತುಳುಕಿದ್ದು, ಪೆಂಡಾಲ್ ಹೊರಗಡೆಯೂ ಭಕ್ತರು ಕಿಕ್ಕಿರಿದು ನೆರೆದಿದ್ದರು.
ಶ್ರೀನಿವಾಸ ದೇವರ ಅಶೀರ್ವಾದ ಪಡೆಯಲು ಮಧ್ಯಾಹ್ನ ಸರತಿ ಸಾಲಿನಲ್ಲಿ ಭಕ್ತರು ವೇದಿಕೆಗೆ ಬಂದು ಶ್ರೀನಿವಾಸ ದೇವರ ದರುಶನ ಪಡೆದು ಅರ್ಚಕರಿಂದ ತಿರುಪತಿ ತಿಮ್ಮಪ್ಪನ ಕಿರೀಟ ಸ್ಪರ್ಶದ ಆಶೀರ್ವಾದ ಪಡೆದರು.
ಶ್ರೀನಿವಾಸ ಕಲ್ಯಾಣೋತ್ಸವ ಸಭಾಂಗಣದ ಮುಂಭಾಗದಲ್ಲಿ ನಿರ್ಮಿಸಲಾದ 25 ಸಾವಿರ ಚದರ ಅಡಿ ವಿಸ್ತೀರ್ಣದ ವಿಶಾಲವಾದ ಪೆಂಡಾಲ್‌ನಲ್ಲಿ ‘ಶಾಕಂಬರಿ ಅನ್ನಛತ್ರ’ದಲ್ಲಿ ಅನ್ನಪ್ರಸಾದ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಸರತಿ ಸಾಲಿನಲ್ಲಿ ಬಂದ ಭಕ್ತರಿಗೆ ಮೂರು ಕೌಂಟರ್‌ನಲ್ಲಿ ಅನ್ನಪ್ರಸಾದ ವಿತರಣೆ ಮಾಡಲಾಗುತ್ತಿತ್ತು.ಪೆಂಡಾಲ್ ಸುತ್ತ ಕುಳಿತುಕೊಳ್ಳಲು ಚಯರ್ ವ್ಯವಸ್ಥೆ ಮಾಡಲಾಗಿತ್ತು.
ಸಣ್ಣ ಮಕ್ಕಳೊಂದಿಗೆ ಬಂದ ತಾಯಂದಿರು, ವಯಸ್ಕರನ್ನು ಕಲ್ಯಾಣೋತ್ಸವ ಸಮಿತಿ ಕಾರ್ಯಕರ್ತರು ನೇರವಾಗಿ ಅನ್ನಪ್ರಸಾದ ಕೌಂಟರ್‌ಗೆ ಕರೆದೊಯ್ದು ಅವರಿಗೆ ಸಾವಕಾಶವಾಗಿ ಊಟ ಮಾಡಲು ವ್ಯವಸ್ಥೆ ಕಲ್ಪಿಸುತ್ತಿದ್ದರು.ಮಧ್ಯಾಹ್ನ ಜರಗಿದ ಅನ್ನಸಂತರ್ಪಣೆಯಲ್ಲಿ ಸುಮಾರು 20 ಸಾವಿರ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ರಾತ್ರಿ 50 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಿತು ಎಂದು ಸಮಿತಿಯವರು ಮಾಹಿತಿ ನೀಡಿದ್ದಾರೆ.ಅಡುಗೆ ತಯಾರಿಗೆ ಸ್ವಯಂ ಸೇವಕರು ರಾತ್ರಿ ಹಗಲು ತರಕಾರಿ ಹಚ್ಚಿದರು.ಅನ್ನಪ್ರಸಾದ ವಿತರಣೆಯ ವಿಭಾಗದಲ್ಲೇ ದೇವರ ಸೇವಾ ಪ್ರಸಾದ ವಿತರಣೆ ಕೌಂಟರ್ ತೆರೆಯಲಾಗಿತ್ತು.
ಮಧ್ಯಾಹ್ನ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ವೇದಿಕೆಯ ಮುಂದೆ ಸಭಾಂಗಣದಲ್ಲಿ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.ಷಣ್ಮುಖದೇವಾ ಮಹಿಳಾ ಕುಣಿತ ಭಜನಾ ತಂಡ ಪೆರ್ಲಂಪಾಡಿ, ಶ್ರೀ ನಾಗಪಂಚಶ್ರೀ ಭಜನಾ ಮಂಡಳಿ ವಿದ್ಯಾಪುರ ಕಬಕ, ಶ್ರೀ ಮಹಾಮ್ಮಾಯ ಭಜನಾ ತಂಡ ಶೇಣಿ,ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಮುಂಡೂರು, ನಂದೀಶ್ವರ ಭಜನಾ ಮಂಡಳಿ ಬೆದ್ರಾಳ, ಶ್ರೀ ದುರ್ಗಾ ಕುಣಿತ ಭಜನಾ ಮಂಡಳಿ ಕೆಯ್ಯೂರು, ಶ್ರೀ ಧರ್ಮರಸು ಕುಣಿತ ಭಜನಾ ತಂಡ ಪಾಲ್ತಾಡಿ, ಶ್ರೀ ಉಳ್ಳಾಕುಲು ಮಕ್ಕಳ ಕುಣಿತಾ ಭಜನಾ ತಂಡ ಪಯಂದೂರು, ಶ್ರೀ ರಾಮ ಮಕ್ಕಳ ಕುಣಿತ ಭಜನಾ ತಂಡ ಕೆಯ್ಯೂರು, ಶ್ರೀ ಮಹಮ್ಮಾಯಿ ಕುಣಿತ ಭಜನಾ ತಂಡ ಕೊಳ್ತಿಗೆ ಪೆರ್ಲಂಪಾಡಿ, ಶ್ರೀ ವನದುರ್ಗಾಂಬಿಕಾ ಮಕ್ಕಳ ಕುಣಿತ ಭಜನಾ ಮಂಡಳಿ ದೇವನಗರ ಪುರುಷರಕಟ್ಟೆ, ಅಕ್ಷಯ ಕಾಲೇಜು ಪುತ್ತೂರು ಸಹಿತ ಹಲವಾರು ಭಜನಾ ತಂಡಗಳಿಂದ ಮಧ್ಯಾಹ್ನದ ಬಳಿಕ ನಿರಂತರ ಕುಣಿತ ಭಜನೋತ್ಸವ ನಡೆಯಿತು.
ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಮಾಂಗಲ್ಯ ಧಾರಣೆ ಸಂದರ್ಭ ಸುಡುಮದ್ದು ಪ್ರದರ್ಶನ ನಡೆಯಿತು.ಸುಮಾರು 20 ನಿಮಿಷಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆಯಿತು.
ಶ್ರೀನಿವಾಸ ಕಲ್ಯಾಣೋತ್ಸವದ ತ್ರಿನೇತ್ರ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಬ್ರಹ್ಮಶ್ರೀ ವೇ.ಮೂ.ಕುಂಟಾರು ರವೀಶ ತಂತ್ರಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ದಂಪತಿ, ಅಧ್ಯಕ್ಷ ನರಸಿಂಹಪ್ರಸಾದ್ ದಂಪತಿ, ಸಮಿತಿ ಗೌರವಾಧ್ಯಕ್ಷ ಸಿದ್ದನಾಥ್ ಯಸ್ ಕೆ ದಂಪತಿ, ದಿವಾಕರ ದಾಸ್ ನೇರ್ಲಾಜೆ, ಗೌರವ ಸಲಹೆಗಾರರಾದ ಶಶಾಂಕ ಕೊಟೇಚಾ, ಗೋಪಾಲಕೃಷ್ಣ ಭಟ್ ದ್ವಾರಕ, ಚಂದಪ್ಪ ಮೂಲ್ಯ, ಡಾ.ಸುರೇಶ್ ಪುತ್ತೂರಾಯ, ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ್ ಕುಲಾಲ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು ಸಹಿತ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.
ಸಭಾಂಗಣದಲ್ಲಿ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧಿಶೆ ಸರಿತಾ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಬಲರಾಮ ಆಚಾರ್ಯ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಬಿಜೆಪಿ ಪಕ್ಷದ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಹರಿಪ್ರಸಾದ್ ಯಾದವ್, ನಿತೀಶ್ ಕುಮಾರ್ ಶಾಂತಿವನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣಾಕರ ರೈ, ಸಂತೋಷ್ ಕುಮಾರ್ ಎ, ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು,ಬಡಗನ್ನೂರು ಗ್ರಾ.ಪಂ.ಮಾಜಿ ಸದಸ್ಯ ಸುನಿಲ್ ಬೋರ್ಕರ್, ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ ನಡುಬೈಲು, ಹೋಟೆಲ್ ಉದ್ಯಮಿ ಹರಿನಾರಾಯಣ ಹೊಳ್ಳ, ಶಿವಪ್ರಸಾದ್ ಇಜ್ಜಾವು ಸಹಿತ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭ ಮಾಂಗಲ್ಯ ಧಾರಣೆ ಬಳಿಕ ಪುರೋಹಿತರು ಸಂಕೀರ್ತನೆಯ ಜೊತೆಗೆ, ಮೂರು ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ಪೂರ್ಣಗೊಂಡಿದೆ.ಮುಂದಿನ ವರ್ಷ ಶಿವನ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಾಡುವ ಸಂಕಲ್ಪಕ್ಕೆ ಭಿನ್ನವಿಸಿಕೊಂಡರು.ಎಲ್ಲವೂ ಮಹಾಲಿಂಗೇಶ್ವರನ ಇಚ್ಛೆ.ಈ ಕುರಿತು ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆಯೊಂದಿಗೆ ಕೇಳಿಕೊಳ್ಳಲಾಗುವುದು.ಅವರ ಒಪ್ಪಿಗೆ ಇದ್ದರೆ ದೇವರ ಇಚ್ಚೆಯಂತೆ ಗಿರಿಜಾ ಕಲ್ಯಾಣವೂ ಆಗಲಿದೆ –ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು






















