ಪುತ್ತೂರಿನ ಶ್ರೀನಿವಾಸ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನ ಹೊರದಬ್ಬಿದ ಘಟನೆ ನಡೆದಿದೆ.
ಪುತ್ತೂರಿನಲ್ಲಿ ನಡೆದ ಶ್ರೀನಿವಾಸ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನ ಪುತ್ತಿಲ ಪರಿವಾರದ ಕಾರ್ಯಕರ್ತರು ಹೊರದಬ್ಬಿದ್ದಾರೆ.
ಈ ಹಿನ್ನೆಲೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಕಣ್ಣೀರು ಹಾಕಿದ್ದಾರೆ. ಯಾರೂ ಅವಮಾನಿಸಿದ್ದಾರೋ ಅವರಿಗೆ ಶಿಕ್ಷೆ ನೀಡಬೇಡ, ಬದಲಾಗಿ ಬುದ್ಧಿ ಕೊಡು ಎಂದು ಪ್ರಾರ್ಥನೆ ಮಾಡಿದ್ದಾರೆ. ಪ್ರಾರ್ಥನೆ ವೇಳೆ ಅವರು ಶ್ರೀ ದೇವರ ನಡೆಯಲ್ಲಿ ನಿನ್ನೆ ನಡೆದ ಘಟನೆ ಬಗ್ಗೆ ವಿವರಿಸಿ ‘ನಾನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾಗಿದ್ದು, ಪುತ್ತಿಲ ಪರಿವಾರದಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಹಿಂದು ಸಮಾಜದ ಒಗ್ಗಟ್ಟಿಗಾಗಿ ಸಕ್ರೀಯವಾಗಿ ನಿಷ್ಠೆಯಲ್ಲಿ ಕೆಲಸ ಮಾಡಿದ್ದೇನೆ. ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರಮುಹೂರ್ತ, ಆಮಂತ್ರಣ ಪತ್ರಿಕೆ ವಿತರಣೆ, ಗ್ರಾಮದಲ್ಲಿ ವಿತರಣೆಯಲ್ಲೂ ಭಾಗವಹಿಸಿದ್ದೇನೆ.
ಕಣ್ಣೀರಿಟ್ಟುಕೊಂಡೇ ಮಾಧ್ಯಮಕ್ಕೆ ಹೇಳಿಕೆ ನೀಡಿದ ಪ್ರಸನ್ನ ಕುಮಾರ್ ಮಾರ್ತ, ಪುತ್ತಿಲ ಪರಿವಾರದಲ್ಲಿರುವಾಗಲೂ ನಾನು ಸಮಸ್ತ ಹಿಂದೂಗಳಿಗಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿದ ಮೇಲೂ ಹಿಂದೂ ಸಮಾಜವನ್ನು ಒಟ್ಟು ಗೂಡಿಸುವ ಪ್ರಯತ್ನ ಮಾಡಿದ್ದೇನೆ. ನಿನ್ನೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ನನ್ನ ಮನೆಗೆ ಬಂದು ನನ್ನನ್ನ ಆಹ್ವಾನಿಸಿದ್ದರು,ಶ್ರೀನಿವಾಸ ಕಲ್ಯಾಣೋತ್ಸವದ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾನು ಸಕ್ರೀಯವಾಗಿ ಭಾಗವಹಿಸಿದ್ದೇನೆ.
ಆದ್ರೆ ಇತ್ತೀಚೆಗೆ ನಡೆದಂತ ರಾಜಕೀಯ ವಿದ್ಯಾಮಾನದ ಬಳಿಕ ನನ್ನನ್ನ ಬಿಜೆಪಿಗೆ ರಾಜೀನಾಮೆ ನೀಡ್ಬೇಕು ಎಂದು ಪುತ್ತಿಲ ಪರಿವಾರದವ್ರು ಒತ್ತಡ ಹಾಕ್ತಾ ಇದ್ದಾರೆ. ಆದರೂ ನನ್ನನ್ನ ಪುತ್ತಿಲ ಪರಿವಾರದ ಪ್ರಮುಖರು ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದರು. ಅದರಂತೆ ನಿನ್ನೆ ನಾನು ಕುಟುಂಬ ಸಮೇತ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಆದ್ರೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಕಾರ್ಯಕ್ರಮ ಗೇಟ್ ಬಳಿಯಲ್ಲಿಂದಲೇ ಹೊರದಬ್ಬುವಂತ ಕೆಲಸ ಮಾಡಿದ್ದಾರೆ. ಈ ವಿದ್ಯಾಮಾನದಿಂದ ಕೊರಗಿ ನನ್ನ ಪತ್ನಿ ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ಕಣ್ಣಿರಾಕಿದ್ದಾಳೆ.
ಪುತ್ತಿಲ ಪರಿವಾರದ ಕಾರ್ಯಕರ್ತರ ನಡೆಯಿಂದ ತುಂಬಾ ಬೇಸರಗೊಂಡಿದ್ದೇನೆ. ಪುತ್ತಿಲ ಪರಿವಾರದವ್ರು ನನಗೆ ಮಾಡಿದ ಅವಮಾನ ಮಹಾಲಿಂಗೇಶ್ವರ ದೇವರಿಗೆ ಗೊತ್ತಿದೆ.ನನಗೆ ಅವಮಾನ ಮಾಡಿದಂತ ವ್ಯಕ್ತಿಗೆ ಸಂಸಾರ ಇರುವ ಕಾರಣ ಆತನಿಗೆ ಶಿಕ್ಷೆ ಬೇಡ, ಬದಲಿಗೆ ಬುದ್ಧಿಕೊಡಿ ಎಂದು ಕೇಳಿಕೊಂಡಿದ್ದೇನೆ.
ಯಾರದ್ದೋ ಪ್ರೇರಣೆಗೊಳಗಾಗಿ ಈ ರೀತಿ ವರ್ತನೆ ಮಾಡಿದ್ದಾನೆ. ಇದನ್ನು ಯಾರು ಮಾಡಿಸಿದ್ದಾರೋ ಅವರಿಗೂ ಬುದ್ಧಿ ಕೊಡಲಿ. ನಿನ್ನೆಯ ಕಾರ್ಯಕ್ರಮದಲ್ಲಿ ನನ್ನ ಒಬ್ಬನ ಮೇಲೆ ಅವಮಾನ ಮಾಡಿದ್ದಾರೆ. ಬಿಜೆಪಿ ಪಕ್ಷದ ಜವಾಬ್ದಾರಿ ಇರುವವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದ್ರೆ ನನ್ನನ್ನು ಒಬ್ಬನನ್ನೇ ಅವಮಾನ ಮಾಡಿದ್ದಾರೆ. ಈ ಎಲ್ಲಾವನ್ನು ಮಹಾಲಿಂಗೇಶ್ವರ ದೇವರು ತೀರ್ಮಾನ ಮಾಡುತ್ತಾನೆ.
ನನ್ನ ರಾಜೀನಾಮೆಗೆ ಒತ್ತಾಯಿಸಿದ ವ್ಯಕ್ತಿಯ ಹೆಸರನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಿನ್ನೆ ನಡೆದ ಘಟನೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನಗೆ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಪ್ರಮುಖರು ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ ಎಂದು ಮಾತನಾಡಿದ್ದಾರೆ.























