ಉಡುಪಿ :ಪ್ರಧಾನಿ ಮೋದಿ ಉಡುಪಿ ಬಂದ ನಂತರದಲ್ಲಿ ಸಾಕಷ್ಟು ವಿವಾದಗಳು ಕೂಡ ನಡೆಯಿತು. ಅದರಲ್ಲೂ ಉಡುಪಿಯ ವಿಶೇಷ ಸಂಬಂಧ ಇರುವ ನಾಯಕರಾದ ಪ್ರಮೋದ್ ಮದ್ವರಾಜ್ ಅವರಿಗೆ ಮೋದಿಯವರನ್ನು ಭೇಟಿಯಾಗುವ ಅವಕಾಶವೇ ಸಿಗಲಿಲ್ಲ.ಅನ್ನೋದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.. ಇದೀಗ ಮೋದಿ ಭೇಟಿಯ ಸಂದರ್ಭದಲ್ಲಿ ಬಿಜೆಪಿಯ ಯಾವುದೇ ಹುದ್ದೆಯಲ್ಲಿಲ್ಲದ ಕಿಶೋರ್ ಬೊಟ್ಯಾಡಿ ಪತ್ನಿಗೆ ಸುಳ್ಳು ಮಾಹಿತಿಯ ಮೂಲಕ ಅವಕಾಶ ನೀಡಲಾಗಿದೆ ಎಂಬ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಪತ್ನಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭದ್ರತಾ ನಿಯಮವನ್ನು ಎಂಎಲ್‌ಸಿ ಕಿಶೋರ್ ಕುಮಾರ್ ಗಾಳಿಗೆ ತೂರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಧಾನಿ ಕಛೇರಿಗೆ ಸುಳ್ಳು ದಾಖಲೆಗಳನ್ನು ನೀಡಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ತಮ್ಮ ಪತ್ನಿಗೆ ಪ್ರವೇಶ ಒದಗಿಸಿದ್ದಾರಾ? ಸುಳ್ಳು ಹೇಳಿ, ಭದ್ರತಾ ನಿಯಮವನ್ನು ಮೀರಿದ್ರಾ? ಹೀಗಂತ ಇದೀಗ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ.
ನವೆಂಬರ್ 28ಕ್ಕೆ ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಬಂದಿದ್ದರು. ಈ ವೇಳೆ ಪ್ರಧಾನಿಯವರನ್ನು ಕಿಶೋರ್ ಕುಮಾರ್ ಪತ್ನಿ ಪ್ರೀತಿ ದಾಸು ಭಂಡಾರಿ ಸ್ವಾಗತಿಸಿದ್ದಾರೆ. ಮೋದಿಯನ್ನು ಸ್ವಾಗತಿಸುವ ಫೋಟೋ ಲಭ್ಯವಿದೆ. ಆದರೆ ಪ್ರೀತಿ ದಾಸು ಭಂಡಾರಿಯವರು ಮೋದಿಯವರನ್ನು ಸ್ವಾಗತಿಸುವುದಕ್ಕೆ ಯಾವ ಆಧಾರದಲ್ಲಿ ಪ್ರವೇಶ ಪಡೆದರು ಎಂಬುವುದು ಈಗ ಚರ್ಚೆಯ ವಿಷಯ.
ಬಿಜೆಪಿಯಲ್ಲಿ ಕಿಶೋರ್ ಕುಮಾರ್ ಬೊಟ್ಯಾಡಿ ಸಕ್ರಿಯರಾಗಿದ್ದಾರೆ. ಆದ್ರೆ, ಅವರ ಪತ್ನಿ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಹೀಗಿದ್ದರೂ, ಬಿಜೆಪಿಯ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಎಂದು ಸುಳ್ಳು ಮಾಹಿತಿ ನೀಡಿ ಪಾಸ್ ಪಡೆದು ಮೋದಿಯವರನ್ನು ಭೇಟಿ ಮಾಡಿಸಿದ್ದಾರೆ. ಇದು ಸ್ವತಃ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
2024 ರಲ್ಲಿ ಎಂಎಲ್‌ಸಿ ಚುನಾವಣೆಯ ಸಮಯದಲ್ಲಿ ಕಿಶೋರ್ ಕುಮಾರ್ ಸಲ್ಲಿಸಿದ ಅಫಿದಾವಿತ್‌ನಲ್ಲಿ , ತನ್ನ ಪತ್ನಿಗೆ ಬಿಜೆಪಿಯಲ್ಲಿ ಯಾವುದೇ ಹುದ್ದೆ ಇಲ್ಲ ಮತ್ತು ಪಕ್ಷದ ಸಾಮಾನ್ಯ ಸದಸ್ಯೆ ಎಂದು ಉಲ್ಲೇಖಿಸಿದ್ದಾರೆ. ಇದ್ರಿಂದಲೇ ಪತ್ನಿಗೆ ಯಾವುದೇ ಹುದ್ದೆ ಇಲ್ಲ ಎಂಬುವುದು ದೃಢವಾಗಿದೆ.
ಒಂದು ವೇಳೆ ಎಂಎಲ್‌ಸಿ ಕಿಶೋರ್ ತಮ್ಮ ಅಧಿಕಾರ ಬಳಸಿ, ತಮ್ಮ ಪತ್ನಿಗೆ ಪ್ರಧಾನಿ ಮೋದಿಯನ್ನು ಸ್ವಾಗತಿಸುವ ಅವಕಾಶ ಮಾಡಿಕೊಟ್ಟಿದ್ದೇ ಆದಲ್ಲಿ, ಭದ್ರತಾ ನಿಯಮ ಉಲ್ಲಂಘಿಸಿರೋದು ಸ್ಪಷ್ಟವಾಗುತ್ತೆ. ಪ್ರಧಾನಿ ಮೋದಿಯಂತ ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಭದ್ರತಾ ನಿಯಮವನ್ನು ಮೀರಿ ಈ ರೀತಿಯಾಗಿ ವರ್ತಿಸಿದ ಎಂಎಲ್‌ಸಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಮೋದಿ ಭೇಟಿ ಅವಕಾಶ ಸಿಕ್ಕಿಲ್ಲ. ಉಡುಪಿಯಲ್ಲಿ ಮೋದಿ ಭೇಟಿ ವಿವಾದವನ್ನು ಬಿಜೆಪಿ ನಾಯಕರು ಸುಖಾಂತ್ಯಗೊಳಿಸುತ್ತಿದ್ದಂತೆ ಇದೀಗ ಮತ್ತೆ ಮೋದಿ ಕಾರ್ಯಕ್ರಮ ಬಿಜೆಪಿ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗ್ತಿದೆ, ಸುಳ್ಳಿನ ಕಥೆ ಕಟ್ಟಿ, ಮೋದಿಯವರನ್ನು ಭೇಟಿ ಮಾಡಿಸುವ ಅವಕಾಶ ಏನಿತ್ತು? ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೂ ತಮ್ಮ ನೆಚ್ಚಿನ ನಾಯಕನನ್ನು ಭೇಟಿಯಾಗುವ ಆಸೆ ಇರುತ್ತೆ. ಆದ್ರೆ, ಭದ್ರತೆಯ ಕಾರಣದಿಂದ ಕೆಲ ಅದೃಷ್ಟ ಕಾರ್ಯಕರ್ತರಿಗಷ್ಟೇ ಭೇಟಿ ಭಾಗ್ಯ ಸಿಗುತ್ತೆ.
ಅಂತಹದ್ರಲ್ಲಿ, ಅಧಿಕಾರದ ಬಲ ಬಳಸಿ ಕಾರ್ಯಕರ್ತರನ್ನ ಕಡೆಗಣಿಸಿ, ಕಿಶೋರ್ ಕುಮಾರ್ ನಡೆದುಕೊಂಡಿರುವ ರೀತಿ ಬಿಜೆಪಿ ವಲಯದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗ್ತಿದೆಈ ಘಟನೆಯನ್ನು ಪ್ರಮೋದ್ ಮದ್ವರಾಜ್ ಆಂಡ್ ಟೀಂ ಯಾವ ರೀತಿ ಪರಿಗಣಿಸುತ್ತದೆ ಎಂಬ ಕುತೂಹಲ ಕೂಡ ಇದೆ.























