ಪುತ್ತೂರು: ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಆರೋಪದಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದರ ವಿರುದ್ಧ ಪ್ರತಿದೂರು ಕೂಡಾ ದಾಖಲಾಗಿದೆ.
ಸಾಮೆತ್ತಡ್ಕ ನಿವಾಸಿ ಪ್ರಸನ್ನ ಕುಮಾರ್ ಶೆಟ್ಟಿ ಮತ್ತು ಕೈಕಾರ ನಿವಾಸಿ ಗಂಗಾಧರ ಶೆಟ್ಟಿ ದೂರು ನೀಡಿದವರು.ಪ್ರಸನ್ನ ಕುಮಾರ್ ಶೆಟ್ಟಿಯವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.‘ನಾನು ಮತ್ತು ಚಂದ್ರಹಾಸ ಶೆಟ್ಟಿ ಕಡಬ,ಗಂಗಾಧರ ಶೆಟ್ಟಿ ಕೈಕಾರ ಅವರು ಬಂಟ ಸಮುದಾಯಕ್ಕೆ ಸೇರಿದವರಾಗಿದ್ದು ಈ ಹಿಂದೆ ಆತ್ಮೀಯರಾಗಿದ್ದೆವು.
ಸುಮಾರು 5 ವರ್ಷಗಳ ಹಿಂದೆ ಸರಿಯಾದ ಆತ್ಮೀಯತೆ ಕೂಡಿ ಬಾರದ ಕಾರಣ ಸ್ನೇಹವನ್ನು ಬಿಟ್ಟಿದ್ದೆವು.ಈ ದ್ವೇಷದಿಂದ ಚಂದ್ರಹಾಸ ಶೆಟ್ಟಿ ಮತ್ತ್ತು ಗಂಗಾಧರ ಶೆಟ್ಟಿಯವರು ಬಂಟ ಸಮಾಜದ ಕಾರ್ಯಕ್ರಮಗಳಲ್ಲಿ ಮತ್ತು ಔತಣಕೂಟಗಳಲ್ಲಿ, ಪ್ರಸನ್ನ ಕುಮಾರ್ ಶೆಟ್ಟಿಯನ್ನು ಬೆಳೆಯಲು ನಾವು ಬಿಡಬಾರದು ಮತ್ತು ಅವರ ಉದ್ದಿಮೆಯನ್ನು ಮುಗಿಸಬೇಕು ಎಂದು ಹೇಳುತ್ತಿದ್ದುದಲ್ಲದೆ ನನ್ನ ಕೊಲೆ ಮಾಡುವುದಾಗಿ ಹಲವರಲ್ಲಿ ಹೇಳಿಕೊಂಡಿದ್ದರು ಮತ್ತು ಕೀಳಾದ ಪದಗಳನ್ನು ಬಳಕೆ ಮಾಡಿ ನಿಂದಿಸುವ ಚಾಳಿಯನ್ನು ಇಟ್ಟುಕೊಂಡಿದ್ದರು.
ಕಳೆದ ವಾರ ಬೆಂಗಳೂರಿನಲ್ಲಿದ್ದ ವೇಳೆ, ಗಂಗಾಧರ ಶೆಟ್ಟಿ ಕೈಕಾರ ಅವರಿಗೆ ಕರೆ ಮಾಡಿ,ನನ್ನನ್ನು ಕೊಲೆ ಮಾಡುವುದಾಗಿ ಹೇಳಿರುವ ವಿಚಾರವನ್ನು ಕೇಳಿದಾಗ ಅವರು ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ನ್ಯಾಯಾಲಯದ ಅನುಮೋದನೆಯೊಂದಿಗೆ ಪೊಲೀಸರು ಗಂಗಾಧರ ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿಯವರ ವಿರುದ್ಧ ಕಲಂ 351(2)ಬಿಎನ್ಎಸ್ 2023ರಡಿ ಪ್ರಕರಣ(ಅ.ಕ್ರ.0039/2026)ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೈಕಾರ ಪನಡ್ಕ ನಿವಾಸಿ ಗಂಗಾಧರ ಶೆಟ್ಟಿಯವರು ನೀಡಿದ ದೂರಿನಲ್ಲಿ, ‘ಫೆ.14ರಂದು ರಾತ್ರಿ ಪ್ರಸನ್ನ ಕುಮಾರ್ ಎಂಬವರು ವಾಟ್ಸಪ್ ಕರೆ ಮಾಡಿ ತುಳು ಭಾಷೆಯಲ್ಲಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದರಿಂದ ನಾನು ಕರೆ ಮಾಡಿದ್ದೆ.ಅವರು ಪುನಃ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮತ್ತು ನನ್ನ ಮಗ ಪ್ರಣವ್ನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ತದ ನಂತರ ರಾತ್ರಿ ಗಂಟೆ 11.55ಕ್ಕೆ 1 ಬಾರಿ, 12,38ಕ್ಕೆ 6 ಬಾರಿ, 12.53ಕ್ಕೆ 4 ಬಾರಿ ನಿರಂತರವಾಗಿ ಕರೆಗಳನ್ನು ಮಾಡಿ ಭಯ ಹುಟ್ಟಿಸಿದ್ದಾರೆ.ಕರೆ ಸ್ವೀಕರಿಸದೇ ಇದ್ದಾಗ ಅವರ ಸ್ನೇಹಿತ ಅರಲ್ ಕಲ್ಲಾರೆ ಎಂಬವರು ರಾತ್ರಿ 12.41ಕ್ಕೆ ಕರೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.ಅವರು ನೀಡಿರುವ ದೂರಿನ ಮೇರೆಗೆ ಪ್ರಸನ್ನ ಕುಮಾರ್ ಶೆಟ್ಟಿ ವಿರುದ್ಧ ಪೊಲೀಸರು ಕಲಂ 351(2),352 ಬಿಎನ್ಎಸ್ 2023ರಂತೆ ಪ್ರಕರಣ(0040/2026) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



























