ಕಡಿಮೆ ಹಣ ಹೂಡಿಕೆ ಮಾಡಿ, ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗಿ ಎಂಬ ಸೈಬರ್ ವಂಚಕರ ಆಮಿಷಕ್ಕೆ ದಾವಣಗೆರೆಯ ಬರೋಬ್ಬರಿ 13 ಸಾವಿರ ಜನ ಮೋಸಹೋಗಿದ್ದಾರೆ. ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ ಪ್ರಮುಖ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ ಮಧುರೈ ನಿವಾಸಿ ಚೆಲ್ಲಪಂಡಿ ಸುಬ್ರಹ್ಮಣಿ (42) ಎಂದು ಗುರುತಿಸಲಾಗಿದೆ. ಈತನೊಂದಿಗೆ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ದಾವಣಗೆರೆಯಲ್ಲಿ ಹತ್ತು ಸಾವಿರ ಹೂಡಿಕೆಗೆ ನಿತ್ಯ ನಾಲ್ಕುನೂರು ರೂಪಾಯಿ ಲಾಭದ ಆಮಿಷ ಒಡ್ಡಿದ್ದರು. ದಾವಣಗೆರೆ ಜಿಲ್ಲೆಯ ಹದಿಮೂರು ಸಾವಿರ ಬಡ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಖದೀಮರ ಗ್ಯಾಂಗ್ ನಾವಾಬಿಟ್.ಇನ್ (Navabit.in) ಎಂಬ ನಕಲಿ ಜಾಲತಾಣ ಹಾಗೂ ಆ್ಯಪ್ ರೂಪಿಸಿತ್ತು. ಇದರಲ್ಲಿ ಕನಿಷ್ಠ 10,000 ರೂಪಾಯಿ ಹೂಡಿಕೆ ಮಾಡಿದರೆ, ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ ದಿನಕ್ಕೆ 300 ರಿಂದ 400 ರೂಪಾಯಿ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಆರಂಭದಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಹಣವನ್ನು ಜಮೆ ಮಾಡಿ ನಂಬಿಕೆ ಗಳಿಸುತ್ತಿದ್ದರು. ಈ ಜಾಲಕ್ಕೆ ಸ್ಥಳೀಯರನ್ನೇ ದಾಳವಾಗಿ ಬಳಸಿಕೊಳ್ಳಲಾಗಿತ್ತು.
ಈ ವಂಚನೆ ಜಾಲದ ಆಳ ಎಷ್ಟು ಭೀಕರವಾಗಿದೆ ಎಂದರೆ, ಸ್ಥಳೀಯ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೇ ಈ ದಂಧೆಯಲ್ಲಿ ಭಾಗಿಯಾಗಿ ಜನರನ್ನು ಸೆಳೆಯುತ್ತಿದ್ದರು. ವಂಚನೆಗೆ ಒಳಗಾದ ಸಾದಿಕ್ ಎಂಬುವವರು ಮಾತನಾಡಿ, ಮುಖ್ಯೋಪಾಧ್ಯಾಯಿನಿ ಒತ್ತಡ ಹೇರಿ ನನ್ನಿಂದ ಮೊದಲು 10,000 ರೂ. ಹೂಡಿಕೆ ಮಾಡಿಸಿದ್ದರು. ಒಂದು ತಿಂಗಳು ದಿನಾಲೂ 300 ರೂ. ಬಂತು. ಆಮೇಲೆ ದೊಡ್ಡ ಆಫರ್ ಇದೆ ಎಂದು ನಂಬಿಸಿ 50 ಸಾವಿರದಿಂದ 5 ಲಕ್ಷದವರೆಗೆ ಹೂಡಿಕೆ ಮಾಡಿಸಿಕೊಂಡರು. ಸಾಲ ಮಾಡಿ ಹಣ ಹಾಕಿದ್ದೆವು, ಆದರೆ ರಂಜಾನ್ ಹಬ್ಬದ ವೇಳೆ ಹಣ ಡ್ರಾ ಮಾಡಲು ಹೋದಾಗ ಖಾತೆ ಬ್ಲಾಕ್ ಆಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಸೈಬರ್ ಖದೀಮರು ಪ್ರಮುಖವಾಗಿ ಅಮಾಯಕ ಬಡ ಮಹಿಳೆಯರು, ದಿನಗೂಲಿ ನೌಕರರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದರು. ದಾವಣಗೆರೆ ಜಿಲ್ಲೆಯೊಂದರಲ್ಲೇ ಸುಮಾರು 13,000 ಜನ ಈ ಆ್ಯಪ್ ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಏಪ್ರಿಲ್ 4 ರಂದೇ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿರುವ ಪೊಲೀಸರು ತಮಿಳುನಾಡಿನಲ್ಲಿ ಮುಖ್ಯ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದು, ಸ್ಥಳೀಯ ದಾವಣಗೆರೆಯ ಮೂವರು ಆರೋಪಿಗಳು ಸೇರಿದಂತೆ ಉಳಿದ ಖದೀಮರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚೈನ್ ಲಿಂಕ್ ಮಾದರಿಯ ಸಂಸ್ಥೆಗಳು ವೇಗವಾಗಿ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ, ಸದಸ್ಯರನ್ನು ಸೇರಿಸಿದರೆ ಹೆಚ್ಚುವರಿ ಆದಾಯ ಎಂಬ ಆಮಿಷಗಳನ್ನು ನೀಡಿ ಹಲವಾರು ಸಂಸ್ಥೆಗಳು ಜನರನ್ನು ಸೆಳೆಯುತ್ತಿರುವ ಆರೋಪ ಕೇಳಿಬರುತ್ತಿದೆ.
ತಜ್ಞರ ಪ್ರಕಾರ, ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೊದಲು ಸಂಸ್ಥೆಯ ನೋಂದಣಿ, ವ್ಯವಹಾರ ಮಾದರಿ ಮತ್ತು ಕಾನೂನುಬದ್ಧತೆ ಪರಿಶೀಲಿಸುವುದು ಅಗತ್ಯವಾಗಿದೆ. ಸಾರ್ವಜನಿಕರು ಅನುಮಾನಾಸ್ಪದ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಇಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

























