ಆನ್‌ಲೈನ್ ಟ್ರೇಡಿಂಗ್ ಆಹೆಸರಿನಲ್ಲಿ ಕೇರಳ ಮೂಲದ ಯುವಕರನ್ನು ಬೆಂಗಳೂರಿಗೆ ಕರೆಸಿ 20 ಲಕ್ಷಕ್ಕೂ ಹೆಚ್ಚು ಹಣ ದೋಚಿದ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆನ್‌ಲೈನ್ ಟ್ರೇಡಿಂಗ್‌ನಲ್ಲಿ 25 ಲಕ್ಷ ಹೂಡಿಕೆ ಮಾಡಿದರೆ 50 ಲಕ್ಷ ವಾಪಸ್ ಸಿಗುತ್ತದೆ ಎಂದು ಕೇರಳ ಮೂಲದ ಯುವಕರಿಗೆ ಆಮಿಷ ಒಡ್ಡಲಾಗಿತ್ತು. ಇದನ್ನು ನಂಬಿದ ಯುವಕರು 25 ಲಕ್ಷ ಹಣದೊಂದಿಗೆ ಬೆಂಗಳೂರಿನ ಮಡಿವಾಳದ ಸಿಲಿಕಾನ್ ವ್ಯಾಲಿ ಹೋಟೆಲ್‌ಗೆ ಬಂದಿದ್ದರು. ಯುವಕರು ಹೋಟೆಲ್‌ಗೆ ಬಂದ ಮಾಹಿತಿ ಕುಪೇಂದ್ರನಿಗೆ ತಲುಪಿದ ಬಳಿಕ, ಇನ್ಸ್‌ಪೆಕ್ಟರ್ ಜೀಪ್‌ನಲ್ಲಿ ಬಂದ ಕುಪೇಂದ್ರ ಮತ್ತು ಆತನ ಸಹಚರರು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಹೋಟೆಲ್‌ಗೆ ಪ್ರವೇಶಿಸಿದ್ದಾರೆ.
ಪೊಲೀಸ್ ಗುರುತಿನ ಚೀಟಿ ತೋರಿಸಿ ಯುವಕರಿಗೆ ಬೆದರಿಕೆ ಹಾಕಲಾಗಿದೆ. ನಂತರ ಹಲ್ಲೆ ನಡೆಸಿ 20 ಲಕ್ಷಕ್ಕೂ ಅಧಿಕ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ರಾಬರಿ ನಡೆದ ಬಳಿಕ ಕುಪೇಂದ್ರ ಹಣದೊಂದಿಗೆ ಪೊಲೀಸ್ ಜೀಪ್‌ನಲ್ಲಿ ಪರಾರಿಯಾಗಿದ್ದಾನೆ. ಇನ್ನುಳಿದ ಸಹಚರರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಕೇರಳ ಮೂಲದ ಯುವಕರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಡಕಾಯಿತಿ, ಬೆದರಿಕೆ, ಹಲ್ಲೆ ಮತ್ತು ಒಳಸಂಚು ಆರೋಪದಡಿ ಪ್ರಕರಣ ದಾಖಲಾಗಿದೆ. ಮಡಿವಾಳ ಎಸಿಪಿ ವಾಸುದೇವ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳು ಈ ಹಿಂದೆ ಕೂಡ ಇದೇ ಮಾದರಿಯ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಇದೇ ರೀತಿಯ ಕೃತ್ಯ ನಡೆಸಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
























