ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಕಡ್ಡಾಯವಾಗಿ ತೆರೆದಿರಬೇಕು ಎಂದು ಆಹಾರ ಇಲಾಖೆ ಆದೇಶಿಸಿದೆ.
ನ್ಯಾಯಬೆಲೆ ಅಂಗಡಿಗಳಿಗೆ ಅಗತ್ಯ ಪಡಿತರ ಪೂರೈಕೆಯಾಗಿದ್ದರೂ ಫಲಾನುಭವಿಗಳಿಗೆ ಪಡಿತರ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಜುಲೈ ತಿಂಗಳ ಪಡಿತರವು ಬಹುತೇಕ ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೇ ಪೂರೈಕೆಯಾಗಿದೆ.ಈ ತಿಂಗಳ ಅಂತ್ಯದ ಒಳಗೇ ಎಲ್ಲ ಫಲಾನುಭವಿಗಳಿಗೂ ಪಡಿತರ ವಿತರಿಸಬೇಕಿದೆ.ಇದಕ್ಕಾಗಿ ಎಲ್ಲ ಅಂಗಡಿಗಳು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಬೇಕು ಎಂದು ಇಲಾಖೆ ಸೂಚಿಸಿದೆ.
ಈ ಕುರಿತು ಇಲಾಖೆಯ ಹೆಚ್ಚುವರಿ ನಿರ್ದೇಶಕರು ಎಲ್ಲ ಜಂಟಿ/ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು,ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಈ ಆದೇಶವನ್ನು ಉಲ್ಲಂಸುವ ನ್ಯಾಯಬೆಲೆ ಅಂಗಡಿಗಳ ವಿತರಕರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.























