ಪುತ್ತೂರು: ಮಂತ್ರಾಲಯಕ್ಕೆ ತೆರಳಿದ್ದ ಪುತ್ತೂರು ಮೂಲದ ಉದ್ಯಮಿಯೋರ್ವರು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತರಾದ ಘಟನೆ ವರದಿಯಾಗಿದೆ.
ಬೆಳಿಯೂರುಕಟ್ಟೆ ಮೂಲದವರಾಗಿದ್ದು ನಾರಾಯಣ ಶೆಟ್ಟಿ-ಕುಮುದಾ ದಂಪತಿಯ ಮಗ ಸದ್ಯ ಮಂಗಳೂರುನಲ್ಲಿ ವಾಸ್ತವ್ಯವಿದ್ದ ಸಂದೀಪ್ ಶೆಟ್ಟಿ(44)ಮೃತಪಟ್ಟವರು. ಆ.9ರಂದು ಮಂಗಳೂರುನಿಂದ ಬಸ್ಸಿನಲ್ಲಿ ಮಂತ್ರಾಲಕ್ಕೆ ಹೋಗಿದ್ದ ಅವರು ಹಿಂತಿರುಗಿ ಬರುವಾಗ ಘಟನೆ ಸಂಭವಿಸಿದೆ.ಆ.10ರಂದು ರಾತ್ರಿ ಹಿಂತಿರುಗಿ ಬಂದ ಬಸ್ಸು ಬಳ್ಳಾರಿಯ ಎಪಿಎಂಸಿ ಬಸ್ ನಿಲ್ದಾಣದಲ್ಲಿ ತಂಗಿತ್ತು.ರಾತ್ರಿ 2.30ರ ಸುಮಾರಿಗೆ ಸಂದೀಪ್ ಶೆಟ್ಟಿಯವರು ಬಸ್ಸಿನಿಂದಿಳಿದು ನಿಲ್ದಾಣದಲ್ಲಿ ಕುಳಿತುಕೊಂಡಿ ಮುಂಜಾನೆ 4 ಗಂಟೆ ವೇಳೆಗೆ ಅವರು ಹೃದಯಾಘಾತಕ್ಕೊಳಗಾಗಿದ್ದರು. ಬಳಿಕ ವಿಷಯ ತಿಳಿದ ಇತರ ಪ್ರಯಾಣಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಗಮಿಸಿ, ಬಸ್ ನಿಲ್ದಾಣದಲ್ಲಿನ ಸಿಸಿ ಟಿವಿ ಮೂಲಕ ಘಟನೆ ಖಚಿತ ಪಡಿಸಿಕೊಂಡಿದ್ದರು.
ಸಂದೀಪ್ ಶೆಟ್ಟಿಯವರು ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತರಾಗಿದ್ದ ಕುರಿತು ಪೊಲೀಸರು ಮೃತರ ಮಗನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರು. ಪಿಯುಸಿ ವಿದ್ಯಾರ್ಥಿಯಾಗಿದ್ದ ಮಗ ದೃಪದ್ ಅವರು ಕಾಲೇಜುಲ್ಲಿ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿಟ್ಟಿದ್ದರಿಂದ ಅವರು ಈ ಸಂದೇಶ ನೋಡುವಾಗ ತಡವಾಗಿತ್ತು. ಮಧ್ಯಾಹ್ನದ ಬಳಿಕ ಅವರು ಸಂದೇಶ ನೋಡಿದ ಕೂಡಲೇ ತನ್ನ ತಾಯಿಯ ಸೋದರ ಮಾವ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರಿಗೆ ವಿಷಯ ತಿಳಿಸಿದರು.ಬಳಿಕ ಜಗದೀಶ್ ಶೆಟ್ಟಿ ಮತ್ತು ಮೃತರ ಪತ್ನಿ,ಮಗ ಆ.11ರಂದು ಸಂಜೆ ಬಳ್ಳಾರಿಗೆ ಹೋಗಿದ್ದು ಮೃತದೇಹವನ್ನು ಇನ್ನಷ್ಟೆ ಊರಿಗೆ ತರಬೇಕಿದೆ ಎಂದು ತಿಳಿದು ಬಂದಿದೆ.
ಬೆಳಿಯೂರುಕಟ್ಟೆ ಮೃತರು ಪತ್ನಿ ವಿದ್ಯಾ ಶೆಟ್ಟಿ, ಮಗ ದೃಪದ್, ತಾಯಿ ಕುಮುದಾ,ಸಹೋದರ ದಿಲೀಪ್ ಅವರನ್ನು ಅಗಲಿದ್ದಾರೆ.
























