ಪುತ್ತೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾಮನ್ ಸರ್ವಿಸ್ ಸೆಂಟರ್‌ಗಾಗಿ ಮಂಜೂರಾದ ಅನುದಾನದಲ್ಲಿ ಸಿಟಿಒ ಗುಡ್ಡದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಅದು ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿಲ್ಲ. ಇದೀಗ ಆ ಕಟ್ಟಡಕ್ಕೆ ಸಿಎಸ್‌ಸಿ ಸ್ಥಳಾಂತರಿಸಬೇಕೆಂದು ಬಿಜೆಪಿ ಹಾಗೂ ಎಸ್‌ಡಿಪಿಐ ಒತ್ತಾಯಿಸುತ್ತಿರುವುದು ಸಮುದಾಯಕ್ಕೆ ಮತ್ತಷ್ಟು ಅನಾನುಕೂಲ ಉಂಟುಮಾಡುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಚ್. ಮಹಮ್ಮದ್ ಆಲಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಸ್‌ಸಿ ಪ್ರಸ್ತುತ ತಾಲೂಕು ಪಂಚಾಯತ್ ಕಟ್ಟಡದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿವೇತನ ಅರ್ಜಿ, ಅರಿವು ಸಾಲ, ಶ್ರಮಶಕ್ತಿ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸುವುದು ಹಾಗೂ ಇಲಾಖೆಯ ಯೋಜನೆಗಳ ಮಾಹಿತಿ ಪಡೆಯುವ ಕೆಲಸ ಇಲ್ಲಿ ನಡೆಯುತ್ತಿದೆ. ಸುಮಾರು 1,000 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವಾಗುತ್ತಿದೆ ಎಂದು ಹೇಳಿದರು. ಸಿಟಿಒ ಗುಡ್ಡದಲ್ಲಿರುವ ಕಟ್ಟಡಕ್ಕೆ ಸಿಎಸ್‌ಸಿ ಸ್ಥಳಾಂತರಿಸಿದರೆ ಜನರು ದೂರದ ಪ್ರದೇಶಕ್ಕೆ ತೆರಳಬೇಕಾಗುತ್ತದೆ. ಸಿಎಸ್‌ಸಿಗೆ ಅಗತ್ಯವಿರುವುದು ಸೈಬರ್ ಸೆಂಟರ್ ಮಾದರಿಯ ಸಣ್ಣ ಕಚೇರಿ ಮಾತ್ರವಾಗಿದ್ದು, ಸುಮಾರು 2,000 ಚದರ ಅಡಿ ವಿಸ್ತೀರ್ಣದ ದೊಡ್ಡ ಕಟ್ಟಡದ ಅಗತ್ಯವಿಲ್ಲ. ಆದ್ದರಿಂದ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಬಾಲಕರ ಹಾಸ್ಟೆಲ್ ಆರಂಭಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವ ಝಮೀರ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಕಟ್ಟಡದಲ್ಲಿ ಹಾಸ್ಟೆಲ್ ಆರಂಭಿಸುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಹಾಸ್ಟೆಲ್ ಆರಂಭಿಸಲು ಇಲಾಖೆ ಮುಂದಾಗಿದ್ದು, ಈಗಾಗಲೇ ಸುಮಾರು 50 ಮಂಚಗಳು ಬಂದಿವೆ. ಪುತ್ತೂರು ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಂಬತ್ತು ಹಾಸ್ಟೆಲ್‌ಗಳಿದ್ದರೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಒಂದೂ ಹಾಸ್ಟೆಲ್ ಇಲ್ಲ. ಪುತ್ತೂರು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಮೆಡಿಕಲ್ ಕಾಲೇಜು ಕೂಡ ಮಂಜೂರಾಗಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಅಗತ್ಯವಿದೆ ಎಂದು ಅವರು ಹೇಳಿದರು.
ಸರ್ಕಾರಿ ಕಟ್ಟಡಗಳನ್ನು ಜನರಿಗೆ ಸುಲಭವಾಗಿ ತಲುಪುವ ಸ್ಥಳಗಳಲ್ಲಿ ನಿರ್ಮಿಸದೆ, ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಹಮ್ಮದ್ ಆಲಿ ಆರೋಪಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಬಿಜೆಪಿ ಅವಧಿಯಲ್ಲಿ ನಿರ್ಮಿಸಿದ ಕಟ್ಟಡಕ್ಕೆ ಸಿಎಸ್‌ಸಿ ಸ್ಥಳಾಂತರವಾಗದೆ ಪಾಳು ಬಿದ್ದಿದೆ ಎಂದು ಆರೋಪಿಸಿ, ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಟೀಕಿಸಿದ್ದಾರೆ. ಬಳಿಕ ಎಸ್‌ಡಿಪಿಐ ಕೂಡ ಇದೇ ವಿಚಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದೆ. ಬಿಜೆಪಿಯವರು ಎತ್ತಿದ ವಿಚಾರವನ್ನೇ ಎಸ್‌ಡಿಪಿಐ ಮುಂದುವರಿಸಿ ಕೊಂಡು ಹೋಗುತ್ತಿದೆ. ಕಾಂಗ್ರೆಸ್ ಅನ್ನು ಟೀಕಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಎರಡೂ ಪಕ್ಷಗಳು ಈ ವಿಷಯವನ್ನು ಬಳಸಿಕೊಳ್ಳುತ್ತಿವೆ ಎಂದು ಮಹಮ್ಮದ್ ಆಲಿ ಆರೋಪಿಸಿದರು.
ಬೆದ್ರಾಳದಲ್ಲಿ ರಾಜ್ಯ ಹೆದ್ದಾರಿ ಸಮೀಪ ನಿರ್ಮಿಸಬೇಕಾಗಿದ್ದ ಮೌಲಾನಾ ಆಜಾದ್ ವಸತಿ ಶಾಲೆಯನ್ನು ಸಾಲ್ಮರದ ಒಳಭಾಗದಲ್ಲಿ, ಸೂಕ್ತ ರಸ್ತೆ ಸಂಪರ್ಕವಿಲ್ಲದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ವಿಚಾರದಲ್ಲೂ ಸಮಸ್ಯೆ ಎದುರಾಗಿದ್ದು, ಮಣ್ಣಿನ ಮೇಲೆಯೇ ಪೈಪ್ ಅಳವಡಿಸಿ ನೀರು ಪೂರೈಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದೇವರಾಜ ಅರಸು ಭವನವನ್ನು ಕೂಡ ಗುಡ್ಡ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಸೂಕ್ತ ರಸ್ತೆ ಸಂಪರ್ಕದ ಕೊರತೆಯಿಂದ ಇಲಾಖೆಯ ಸಿಬ್ಬಂದಿಯೇ ಅಲ್ಲಿಗೆ ತೆರಳಲು ಕಷ್ಟಪಡುತ್ತಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಜಿಡೆಕಲ್ಲಿನಲ್ಲಿ ನಿರ್ಮಿಸಿರುವುದರಿಂದ ಬಡ ಕುಟುಂಬಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚಾರದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಜನರಿಗೆ ಅನುಕೂಲವಾಗುವ ಸ್ಥಳಗಳನ್ನು ಆಯ್ಕೆ ಮಾಡದೆ ಸರ್ಕಾರಿ ಕಟ್ಟಡಗಳನ್ನು ಎಲ್ಲೆಂದರಲ್ಲಿ ನಿರ್ಮಿಸುವುದು ಸಾರ್ವಜನಿಕ ಹಣದ ಸಮರ್ಪಕ ಬಳಕೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಇಂತಹ ಕಟ್ಟಡಗಳ ನಿರ್ಮಾಣದಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಸ್ಥಳದ ಅನುಕೂಲತೆ ಮತ್ತು ಜನರ ಅಗತ್ಯವನ್ನು ಪರಿಗಣಿಸಬೇಕು ಎಂದು ಮಹಮ್ಮದ್ ಆಲಿ ಹೇಳಿದರು. ಸಿಟಿಒ ಗುಡ್ಡದಲ್ಲಿರುವ ಕಟ್ಟಡವನ್ನು ಸಿಎಸ್‌ಯಾಗಿ ಬಳಸುವುದಕ್ಕಿಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್ ಆಗಿ ಬಳಸುವುದು ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ಮಾಜಿ ಅಧ್ಯಕ್ಷ ಶಕೂರು ಹಾಜಿ, ಮುಂಡೂರು ಸಹಕಾರಿ ಸಂಘದ ಉಪಾಧ್ಯಕ್ಷ ಯಾಕುಬು ಮುಲಾರ್, ಪುತ್ತೂರು ನಗರ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ವಿಲ್ಫ್ರೆಡ್ ಫೆರ್ನಾಂಡಿಸ್, ನಗರ ಸಭಾ ಮಾಜಿ ಸದಸ್ಯ ರಿಯಾಜ್ ಪರ್ಲಡ್ಕ, ದಕ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಅಬ್ಬಾಸ್ ಕುಂತೂರು, ಮುಸ್ಲಿಂ ಮುಖಂಡರಾದ ಸಾಲಿ ಶಾಂತಿನಗರ ಉಪಸ್ಥಿತರಿದ್ದರು.




























