ಪುತ್ತೂರು ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ಸೇವಾ ಕೇಂದ್ರದಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ ಕೂರ್ನಡ್ಕ ನಿವಾಸಿ ಅಂಗಡಿಯಾತ ಹಾಗೂ ಗ್ರಾಹಕಿ ನಡುವೆ ನಡೆದ ಮಾತಿನ ಚಕಮಕಿ ಬಳಿಕ ಎರಡೂ ಕಡೆಯವರ ಬೆಂಬಲಿಗರು ಗುಂಪುಗೂಡಿದ ಪರಿಣಾಮ ದರ್ಭೆ ಜಂಕ್ಷನ್‌ನಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ದರ್ಬೆ ಡಿಜಿಟಲ್ ಸೇವಾ ಕೇಂದ್ರದಲ್ಲಿ ಜೆರಾಕ್ಸ್ ಮಾಡಲೆಂದು ಅಂಗಡಿಗೆ ಮಹಿಳೆಯೊಬ್ಬರು ಗ್ರಾಹಕಿಯಾಗಿ ಬಂದಿದ್ದ ವೇಳೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಮಹಿಳಾ ಸಿಬ್ಬಂದಿ ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ವಿಷಯ ತಿಳಿದು ಎರಡೂ ಕಡೆಯವರ ಬೆಂಬಲಿಗರು ಸ್ಥಳದಲ್ಲಿ ಗುಂಪುಗೂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ನಾಲ್ವರನ್ನು ವಿಚಾರಣೆಯ ದೃಷ್ಟಿಯಿಂದ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಬೀಸಿದ್ದು, ಘಟನೆ ನೋಡಲು ಸೇರಿದ್ದ ಕೆಲವರಿಗೂ ಲಾಠಿ ಏಟು ಬಿದ್ದಿದೆ ಎನ್ನಲಾಗಿದೆ. ಬಳಿಕ ಹಲವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಘಟನೆಯಿಂದ ದರ್ಭೆ ಜಂಕ್ಷನ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ವಿಚಾರಣೆಯಿಂದ ತಿಳಿದುಬರಬೇಕಿದೆ.
























