ಮಂಗಳೂರು: ದಶಕಗಳ ಬೇಡಿಕೆಯಾದ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಮುಕ್ತಗೊಳಿಸಿ, ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಿಶೋರ್ ಕುಮಾರ್ ಪುತ್ತೂರು ಸ್ವಾಗತಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಸಲ್ಲಿಸಿರುವ ಅವರು, ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ದಶಕಗಳ ಕಾಲ ಮಂಗಳೂರು ರೈಲ್ವೆ ವ್ಯವಸ್ಥೆ ಕೇರಳದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚುವರಿ ರೈಲುಗಳಿಗಾಗಿ ಬೇಡಿಕೆ ಇಟ್ಟರೂ ಸ್ಪಂದಿಸದ ದಕ್ಷಿಣ ರೈಲ್ವೆ, ಕೇರಳಕ್ಕೆ ಅನುಕೂಲವಾಗುವ ರೈಲುಗಳಿಗೆ ಆದ್ಯತೆ ನೀಡುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.
ಮಂಗಳೂರು ಸೆಂಟ್ರಲ್‌ನಲ್ಲಿ ಟ್ರ್ಯಾಕ್ ಡಬ್ಲಿಂಗ್ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳಲ್ಲೂ ವಿಳಂಬ ಮಾಡಲಾಗಿದೆ. ಹೊಸ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣದ ಬಳಿಕ ಮಂಗಳೂರಿಗೆ ಅಗತ್ಯವಿರುವ ಹೊಸ ರೈಲುಗಳ ನಿರೀಕ್ಷೆ ಇತ್ತು. ಆದರೆ ಕೇರಳಕ್ಕೆ ಅನುಕೂಲವಾಗುವ ರೈಲುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು ಎಂಬುದು ಕರಾವಳಿಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕಿಶೋರ್ ಕುಮಾರ್ ಹೇಳಿದ್ದಾರೆ.
ಇದೀಗ ಮಂಗಳೂರು ರೈಲ್ವೆ ನೈರುತ್ಯ ರೈಲ್ವೆಗೆ ಸೇರ್ಪಡೆಯಾಗುತ್ತಿರುವುದನ್ನು ವಿರೋಧಿಸಿ ಕೇರಳದ ನಾಯಕರು ಲಾಬಿ ನಡೆಸುತ್ತಿರುವುದು ಖಂಡನೀಯ. ಮಂಗಳೂರು ಹಾಗೂ ಕರಾವಳಿಯ ಅಭಿವೃದ್ಧಿಗೆ ಅಡ್ಡಿಯಾಗುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ಕಾಂಗ್ರೆಸ್ ನಾಯಕರು ಕೇಂದ್ರದ ಈ ನಿರ್ಧಾರದ ಬಗ್ಗೆ ಕನಿಷ್ಠ ಧನ್ಯವಾದವನ್ನೂ ಸಲ್ಲಿಸದೆ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಶೋರ್ ಕುಮಾರ್ ಪುತ್ತೂರು ಟೀಕಿಸಿದ್ದಾರೆ.
ಮಂಗಳೂರು ರೈಲ್ವೆ ನೈರುತ್ಯ ರೈಲ್ವೆಗೆ ಸೇರ್ಪಡೆಯಾಗಿರುವುದು ಕರಾವಳಿಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದಿದ್ದು, ಕರ್ನಾಟಕದ ಅಸ್ಮಿತೆಯ ಗೆಲುವಾಗಿದೆ. ಯಾವುದೇ ಕಾರಣಕ್ಕೂ ಈ ನಿರ್ಧಾರವನ್ನು ಹಿಂಪಡೆಯಬಾರದು ಮತ್ತು ಕೇರಳದ ಯಾವುದೇ ಲಾಬಿಗೆ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಅವರು ಆಗ್ರಹಿಸಿದ್ದಾರೆ.






















