ಪುತ್ತೂರು: ನಗರದ ದರ್ಬೆಯಲ್ಲಿ ನಡೆದ ಅಮಾನವೀಯ ದಾಳಿ, ಪೊಲೀಸರ ಎದುರಲ್ಲೇ ಮಹಿಳೆಯ ಮೇಲೆ ನಡೆದ ಹಲ್ಲೆ ಹಾಗೂ ಪೊಲೀಸ್ ಜೀಪಿನೊಳಗಿಂದಲೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗಳನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಆ.25ರಂದು ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದೆ.
ಈ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿರುವ ವೇದಿಕೆ, ಪ್ರಕರಣಗಳ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ವ್ಯವಸ್ಥಿತ ಪಿತೂರಿ ಇರುವುದಾಗಿ ಆರೋಪಿಸಿದೆ.
ನಗರದಲ್ಲಿ ವರ್ತಕರ ಹಿತರಕ್ಷಣೆ, ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪುತ್ತೂರಿನ ಎಲ್ಲ ಸಮಾಜ ಬಾಂಧವರು ಹಾಗೂ ನಾಗರಿಕರು ಆ.25ರಂದು ಸ್ವಯಂಪ್ರೇರಿತ ಬಂದ್‌ಗೆ ಸಹಕರಿಸುವಂತೆ ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ. ಈ ಕುರಿತು ಆ.24ರಂದು ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಪುತ್ತೂರು ಸ್ವಯಂಪ್ರೇರಿತ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಪೂರ್ಣ ಬೆಂಬಲ ಘೋಷಿಸಿದೆ. ಘಟನೆಯಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ, ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಬೆಳವಣಿಗೆಗಳನ್ನು ಖಂಡಿಸಿ ಬಂದ್‌ಗೆ ಬೆಂಬಲ ನೀಡಲಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 25ರಂದು ಪುತ್ತೂರು ನಗರದಾದ್ಯಂತ ಅಂಗಡಿ-ಮುಂಗಟ್ಟುಗಳು ಸೇರಿದಂತೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸ್ವಯಂಪ್ರೇರಿತ ಬಂದ್‌ಗೆ ಸಹಕರಿಸುವಂತೆ ವಿಶ್ವ ಹಿಂದೂ ಪರಿಷತ್–ಬಜರಂಗದಳ ಮನವಿ ಮಾಡಿದೆ. ಪುತ್ತೂರಿನ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವಂತೆ ಸಂಘಟನೆ ಕರೆ ನೀಡಿದೆ.























