ಪುತ್ತೂರು : ಪುತ್ತೂರಿನಿಂದ ಕುಂಬ್ರ ಕಡೆಗೆ ಸಂಚರಿಸುತ್ತಿರುವ ಆಟೋರಿಕ್ಷದಲ್ಲಿ ತುಂಬು ಗರ್ಭಿಣಿ ಮಹಿಳೆಯೋರ್ವರು ಮಗುವಿಗೆ ಜನ್ಮ ನೀಡಿದ್ದಾರೆ.
ಧನಂಜಯ ಎಂಬುವವರು ಚಲಾಯಿಸುತ್ತಿರುವ ಆಟೋವೊಂದನ್ನು ವಿಜೇತ ಎಂಬುವವರು ಬಾಡಿಗೆಗೆ ಗೊತ್ತುಪಡಿಸಿ,ಕುಂಬ್ರ ಕಡೆಗೆ ತೆರಳುತ್ತಿರುವಾಗ ಕುಂಬ್ರ ಕೌಡಿಚ್ಚಾರ್ ಮದ್ಯೆ ಒಳ ರಸ್ತೆಯಲ್ಲಿ ತೆರಳುತ್ತಿರುವಾಗ ಈ ಘಟನೆ ನಡೆದಿದೆ.ಕುಂಬ್ರದ ಬಳಿ ತಲುಪುವಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು.
ಹತ್ತಿರದಲ್ಲಿ ಜನ ಸಂಚಾರ ಮತ್ತು ಇತರ ಯಾವುದೇ ವಾಹನಗಳು ಇರದ ಕಾರಣ ಧನಂಜಯ ಇವರು ಮಹಿಳೆಯ ಅತ್ತೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾರೆ, ಆದರೆ ಅವರು ಬರುವಾಗ ಸ್ವಲ್ಪ ತಡವಾಯಿತು. ಅದೇ ಸಮಯದಲ್ಲಿ ಅ ಮಾರ್ಗವಾಗಿ ಇಬ್ಬರು ಯುವಕರು ಬಂದರು, ಅವರಲ್ಲಿ ವಿಷಯ ತಿಳಿಸಿದಾಗ ಆ ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿದರು, ಆದರೆ ಆಂಬುಲೆನ್ಸ್ ಸ್ಥಳಕ್ಕೆ ಬರಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಆ ಸಮಯದಲ್ಲಿ ಮಹಿಳೆಗೆ ಹೆರಿಗೆ ನೋವು ಜಾಸ್ತಿಯಾಗಿ ಧನಂಜಯ ಇವರ ರಿಕ್ಷಾದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದರು.ಅ ಬಳಿಕ ಹತ್ತಿರದಲ್ಲೇ ಇದ್ದ ಮನೆಗೆ ಕರೆದುಕೊಂಡು ಹೋಗಿ ಅವರನ್ನು ಉಪಚರಿಸಿ, ಬಳಿಕ ಬಂದ ಆಂಬುಲೆನ್ಸ್ ನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.ತಾಯಿ ಮತ್ತು ಮಗು ಇಬ್ಬರು ಅರೋಗ್ಯದಿಂದ ಇದ್ದಾರೆ ಎಂದು ರಿಕ್ಷಾ ಚಾಲಕ ಧನಂಜಯ ತಿಳಿಸಿದ್ದಾರೆ.
























