ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಕುಡ್ತಪಳಿಕೆ ಎಂಬಲ್ಲಿ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.2ರಂದು ನಡೆದಿದೆ. ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಹಿಳೆಯ ಮೃತದೇಹ ಮನೆಯೊಳಗೆ ನೇಣು ಬಿಗಿದು ಅರ್ದ ಕಾಲು ನೆಲದ ಮೇಲೆ ಬಿದ್ದ ಫೊಟೋ ವೈರಲ್ ಆಗಿದ್ದು ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೃತರಿಗೆ ಇಬ್ಬರು ಮಕ್ಕಳಿದ್ದು ಇತ್ತೀಚೆಗೆ ಹೆಣ್ಣು ಮಗಳ ಮದುವೆ ನೆರವೇರಿಸಿದ್ದರು. ಇನ್ನೋರ್ವ ಗಂಡು ಮಗ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಲಕ್ಷ್ಮೀ ಕೆ.(47ವ.)ಮೃತಪಟ್ಟವರು. ಅವರು ವೈಯಕ್ತಿಕ ಕಾರಣಗಳಿಂದಾಗಿ ಮನನೊಂದು, ವಾಸ್ತವ್ಯದ ಮನೆಯ ಬೆಡ್ ರೂಮ್ ನಲ್ಲಿನ ಕಿಟಕಿಯ ಸರಳುಗಳಿಗೆ ಚೂಡಿದಾರದ ಶಾಲನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಕೃತ್ಯ ಎಸಗಿಕೊಂಡಿದ್ದಾರೆ ಎಂದು ಅವರ ಪುತ್ರಿ ಶ್ರೀಮತಿ ಪ್ರಕೃತಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದುಬರುವ ಸಾಧ್ಯತೆ ಇದೆ.

























