ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಕೆಲವು ಕಡೆಗಳಲ್ಲಿ ಜನರ ಓಡಾಟಕ್ಕೆ ಮತ್ತು ಸಂಪರ್ಕ ರಸ್ತೆಗಳಿಗೂ ತೊಂದರೆಯಾದ ಬಗ್ಗೆ ದೂರುಗಳು ಬಂದಿದ್ದು, ಕಾಮಗಾರಿಯಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅಶೋಕ್ ರೈ ಅವರು ಎನ್ಎಚ್ಎಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಪ್ಪಿನಂಗಡಿ ಬಳಿಯ ಕರ್ವೆಲು, ಪೆರ್ನೆ ಹಾಗೂ ಬಿಳಿಯೂರು ಬಳಿ ಸರ್ವಿಸ್ ರಸ್ತೆಗಳಿಲ್ಲ, ಸಂಪರ್ಕ ರಸ್ತೆಗಳಿಲ್ಲ ಮತ್ತು ಕೆಲವು ಕಡೆಗಳಲ್ಲಿ ಮಣ್ಣು ಹಾಕಿ ಹಳೆಯ ರಸ್ತೆಗಳನ್ನು ಮುಚ್ಚಿ ಹಾಕಲಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಎನ್ಎಚ್ಎಐ ಪ್ರೋಜೆಕ್ಟ್ ಡೈರೆಕ್ಟರ್ ಅಬ್ದುಲ್ ಜಾವೆದ್ ಹಾಗೂ ಇಂಜನಿಯರ್ಗಳನ್ನು ಶಾಸಕರು ಕಚೇರಿಗೆ ಕರೆಸಿ ಮಾತುಕತೆ ನಡೆಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಅಭಿವೃದ್ದಿ ಬೇಕು ಆದರೆ ರಸ್ತೆ ಅಗಲೀಕರಣದ ವೇಳೆ ಜನರಿಗೆ ತೊಂದರೆಯಾಗಬಾರದು. ಈ ಹಿಂದೆ ಇದ್ದ ಕೆಲವು ಸಂಂಪರ್ಕ ರಸ್ತೆಗಳ ಬಳಿ ಯೂ ಟರ್ನ್ ಬದಲಾಯಿಸಲಾಗಿದೆ. ಯೂ ಟರ್ನ್ ಬದಲಾವಣೆಯಾದ ಕಾರಣ ಕಿ.ಮೀ ದೂರ ತೆರಳಿ ತಮ್ಮ ರಸ್ತೆಗಳಿಗೆ ಸಂಪರ್ಕ ಮಾಡಬೇಕಾದ ಸ್ಥಿತಿ ಎಂಬ ದೂರುಗಳು ಇದೆ. ಎಲ್ಲೆಲ್ಲಿ ಯೂ ಟರ್ನ್ ಕೊಡಲು ಸಾಧ್ಯವೋ ಅಲ್ಲಿ ಕೊಡುವ ಕೆಲಸವನ್ನು ಮಾಡಬೇಕು. ಶಾಲೆಗಳು, ದೇವಸ್ಥಾನ, ಮಸೀದಿ ಇರುವಲ್ಲಿ ಸರ್ವಿಸ್ ರಸ್ತೆಗಳು ಮ್ತತು ಯು ಟರ್ನ್ ಗಳನ್ನು ಕೊಡುವಲ್ಲಿ ಕ್ರಮವಹಿಸಬೇಕು. ರಸ್ತೆ ಬದಿ ಎಲ್ಲಿಯಾದರೂ ಮಣ್ಣು ರಾಶಿ ಹಾಕಿ ಸಂಪರ್ಕ ರಸ್ತೆಗೆ ತೊಂದರೆಯಾಗಿದ್ದಲ್ಲಿ ಅದನ್ನು ತೆರವು ಮಾಡಬೇಕು. ಅಪಘಾತ ವಲಯಗಳಲ್ಲಿ ಯಾವುದೇ ಯೂ ಟರ್ನ್ಗಳನ್ನು ಕೊಡಬೇಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಈ ಸಂದರ್ಭ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್ ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.























